ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ ಮಾನವ್ ಶರ್ಮಾ ಎಂಬುವವರು ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುತ್ತಿಗೆಗೆ ನೇಣು ಬಿಗಿದುಕೊಂಡು ಅಳುತ್ತಿರುವ ಲೈವ್ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಾನವ್ ಶರ್ಮಾ ಆತ್ಮಹತ್ಯೆ ಪ್ರಕರಣ ಬೆಂಗಳೂರಿನ ಅತುಲ್ ಸುಭಾಷ್ ಪ್ರಕರಣವನ್ನೇ ಹೋಲುತ್ತಿದೆ. ಆತ್ಮಹತ್ಯೆಗೂ ಮುನ್ನ ಮಾನವ್ 6 ನಿಮಿಷ 57 ಸೆಕೆಂಡ್ ಗಳ ವಿಡಿಯೋ ಕೂಡ ಮಾಡಿದ್ದು ಇದರಲ್ಲಿ ಪತ್ನಿಯಿಂದ ತನಗೆ ಆದ ಚಿತ್ರಹಿಂಸೆಯನ್ನು ಪ್ರಸ್ತಾಪಿಸಿದ್ದಾನೆ.
ಮಾನವ್ ಶರ್ಮಾ ಮೂಲತಃ ಆಗ್ರಾದ ಡಿಫೆನ್ಸ್ ಕಾಲೋನಿಯ ನಿವಾಸಿಯಾಗಿದ್ದು. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಮಾನವ್ ಅವರ ತಂದೆ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾಗಿದ್ದಾರೆ.
ಮಾನವ್ ಶರ್ಮ ಅವರ ತಂದೆ ನರೇಂದ್ರ ಶರ್ಮಾ ಅವರ ಹೇಳಿಕೆಯಂತೆ ತನ್ನ ಮಗನಿಗೆ ಕಳೆದ ವರ್ಷ ಜನವರಿಯಲ್ಲಿ ಮದುವೆಯಾಗಿದ್ದು ಮಗ, ಸೊಸೆ ಇಬ್ಬರೂ ಮುಂಬೈಯಲ್ಲಿ ವಾಸವಾಗಿದ್ದರು. ಆದರೆ ಕೆಲವೇ ತಿಂಗಳ ಬಳಿಕ ಸೊಸೆ ಮಗನ ಜೊತೆ ಜಗಳ ಮಾಡಲು ಆರಂಭಿಸಿದ್ದಾಳೆ. ಅಲ್ಲದೆ ತಮ್ಮ ಕುಟುಂಬದ ಮೇಲೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡುವ ಬಗ್ಗೆಯೂ ಬೆದರಿಸುತಿದ್ದಳು ಎಂದು ಹೇಳಿದ್ದಾರೆ .




