ಬೆಂಗಳೂರು : ಹೆಂಡತಿಯ ಶೀಲ ಶಂಕಿಸಿ ಜಗಳ ತೆಗೆದು ಪತಿಯೊಬ್ಬ ಆಕೆಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದಿರುವ ದಾರುಣ ಘಟನೆ ಆನೇಕಲ್ ನ ವಿನಾಯಕ ಬಡಾವಣೆಯಲ್ಲಿ ನಡೆದಿದೆ. ಗಂಗಾ (27) ಮೃತ ದುರ್ದೈವಿಯಾಗಿದ್ದು, ಗಂಡ ಮೋಹನ್ ರಾಜ್ ಹಂತಕನಾಗಿದ್ದಾನೆ.
ತಿರುಪಾಳ್ಯ ಮೂಲದ ಗಂಗಾ ಮೋಹನ್ ರಾಜ್ ನನ್ನು ಕೆಲವರ್ಷಗಳ ಹಿಂದೆ ವರಸಿದ್ದಳು. ಮೋಹನ್ ರಾಜ್ ಪ್ರತಿದಿನವೂ ಹೆಂಡತಿಯ ಶೀಲದ ಬಗ್ಗೆ ಅಪಮಾನಕರ ಮಾತುಗಳನ್ನಾಡಿ ಜಗಳ ಮಾಡುತ್ತಿದ್ದ. ಇಂದು ಬೆಳಗ್ಗೆಯೂ ಇದೇ ವಿಷಯಕ್ಕೆ ನಡೆದ ಜಗಳ ತಾರಕಕ್ಕೇರಿದ್ದು, ಬೀದಿ ರಂಪಾಟವಾಗಿತ್ತು.
ಇದೇ ವೇಳೆ ಚಾಕುವಿನಿಂದ ಮೋಹನ್ ಪತ್ನಿಯ ಹೊಟ್ಟೆಗೆ ಮೂರ್ನಾಲ್ಕು ಬಾರಿ ಇರಿದಿದ್ದ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಗಂಗಾ ಮೃತಪಟ್ಟಿದ್ದಾಳೆ.
ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೋಹನ್ ರಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




