ಮುನುಗೋಡು/ನೆಲಕೊಂಡಪಲ್ಲಿ, ತೆಲಂಗಾಣ: ತೆಲಂಗಾಣದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವೃದ್ಧ ದಂಪತಿಗಳು ತಮ್ಮ ಪ್ರೀತಿಪಾತ್ರರಿಲ್ಲದೇ ಬದುಕಲು ಸಾಧ್ಯವಾಗದೇ ಪರಸ್ಪರ ಗಂಟೆಗಳೊಳಗೆ ನಿಧನರಾಗಿದ್ದು, ಎಂದೆಂದಿಗೂ ’ನಿನ ಬಿಡೆನು’ ಎಂದು ಸಪ್ತಪದಿ ತುಳಿದವರು ಈಗ ಸಾವಿನಲ್ಲೂ ಒಂದಾಗಿದ್ದಾರೆ.
ಗಂಡನನ್ನು ಕೂಡಿಕೊಂಡ ಹೆಂಡತಿ: ಸ್ಥಳೀಯರ ಪ್ರಕಾರ, ಮುನುಗೋಡು ಮಂಡಲದ ಪಲಿವೇಲ ಗ್ರಾಮದ ದುಬ್ಬ ಶಂಕರಯ್ಯ (67) ಮತ್ತು ಲಕ್ಷ್ಮಿ (57) ಸುಮಾರು ಎರಡು ದಶಕಗಳ ಹಿಂದೆ ಕೆಲಸದ ನಿಮಿತ್ತ ಹೈದರಾಬಾದ್‌ಗೆ ಬಂದಿದ್ದರು. ಶಂಕರಯ್ಯ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದರು. ಅವರಿಗೆ ಸ್ವಂತ ಮಕ್ಕಳಿಲ್ಲದಿದ್ದರೂ, ಅವರು ಪ್ರೀತಿ ಮತ್ತು ಕಾಳಜಿಯಿಂದ ಮಗನೊಬ್ಬನ್ನು ಬೆಳೆಸಿದರು.
ಶಂಕರಯ್ಯ ಅವರು ಕೆಲವು ತಿಂಗಳುಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಭಾನುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅಂತಿಮ ವಿಧಿವಿಧಾನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗಿತ್ತು. ದುಃಖದಿಂದ ತತ್ತರಿಸಿದ ಪತ್ನಿ ಲಕ್ಷ್ಮಿಗೆ ಗಂಡ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಬಂಧುಗಳು ಸಾಂತ್ವನ ಹೇಳಿದರೂ ಅವರಿಗೆ ಉಮ್ಮಳಿಸಿ ಬರುವ ದುಃಖವನ್ನು ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲ.
ಸೋಮವಾರ ಬೆಳಗ್ಗೆ ಪತಿಯ ಶವದ ಪಕ್ಕದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ನಾನಿನ್ನ ಬಿಟ್ಟಿರಲಾರೆ ಎಂಬಂತೆ ಇಬ್ಬರು ಮೃತಪಟ್ಟು ಸ್ವರ್ಗದಲ್ಲೂ ಒಂದಾಗಿದ್ದಾರೆ. ದಂಪತಿಯ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಯಿತು. ಜೀವದ ಹಂಗು ತೊರೆದು ಇವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾದ ಗ್ರಾಮಸ್ಥರು, ಇವರ ಅಗಲಿಕೆ ನೋಡಲಾರದೇ ಕಣ್ಣೀರಿಟ್ಟರು.
ಪತ್ನಿಯ ಶವ ನೋಡಿ ಪತಿ ಸಾವು: ಮುನುಗೋಡು ಮಂಡಲದಲ್ಲಿ ಗಂಡ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲಾರದೇ ಹೆಂಡತಿಯೂ ಕುಸಿದು ಬಿದ್ದ ಮೃತಪಟ್ಟರೆ, ನೆಲಕೊಂಡಪಲ್ಲಿ ಮಂಡಲದ ರಾಮಚಂದ್ರಾಪುರ ಗ್ರಾಮದಲ್ಲಿ ಪತ್ನಿ ಸಾವನ್ನಪ್ಪಿದ್ದರಿಂದ ಅವರ ಪತಿಯೂ ಮೃತಪಟ್ಟ ಘಟನೆ ನಡೆದಿದೆ.
ರಾಮಚಂದ್ರಾಪುರದ ಬೂದತಿ ಯಶೋದಾ (76) ಮತ್ತು ಹನುಮರೆಡ್ಡಿ (81) ಎಂಬ ಕೃಷಿಕ ದಂಪತಿಯೇ ಮೃತಪಟ್ಟ ದಂಪತಿ ಆಗಿದ್ದಾರೆ. ಒಂದು ತಿಂಗಳ ಹಿಂದೆ, ಹನುಮರೆಡ್ಡಿ ಅವರ ಕೈ ಮುರಿದಿತ್ತು. ಆದ್ದರಿಂದ ದಂಪತಿಗಳು ತಮ್ಮ ಮಗ ಆರ್‌ಟಿಸಿ ಕಂಡಕ್ಟರ್ ರಮೇಶ್ ಅವರೊಂದಿಗೆ ಚಿಕಿತ್ಸೆಗಾಗಿ ತಾತ್ಕಾಲಿಕವಾಗಿ ಖಮ್ಮಂಗೆ ಸ್ಥಳಾಂತರಗೊಂಡಿದ್ದರು.
ಭಾನುವಾರ ಸಂಜೆ ಯಶೋದಾ ಮನೆಯಲ್ಲೇ ಕಾಲು ಜಾರಿ ಬಿದ್ದು, ಅವರ ತಲೆಗೆ ಮಾರಣಾಂತಿಕ ಗಾಯವಾಗಿತ್ತು. ನೋವಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆಘಾತದಿಂದ ಕಂಗೆಟ್ಟ ಹನುಮರೆಡ್ಡಿ, ಪತ್ನಿಯ ನಿರ್ಜೀವ ಶವದ ದೃಶ್ಯವನ್ನು ಸಹಿಸಲಾಗದೇ ಒಂದು ಗಂಟೆಯ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದರು. ಅವರನ್ನ ರಕ್ಷಿಸುವ ಪ್ರಯತ್ನ ಮಾಡಿದರೂ ವೈದ್ಯರು ಸ್ಥಳಕ್ಕೆ ಆಗಮಿಸುವಷ್ಟರಲ್ಲೇ ಮೃತಪಟ್ಟಿದ್ದರು. ಇವರನ್ನು ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಅವರ ಪಾರ್ಥಿವ ಶರೀರವನ್ನು ರಾಮಚಂದ್ರಾಪುರಕ್ಕೆ ಕೊಂಡೊಯ್ಯಲಾಯಿತು, ಸೋಮವಾರ ಇಬ್ಬರ ಅಂತಿಮ ವಿಧಿವಿಧಾನಗಳನ್ನು ಒಟ್ಟಿಗೆ ನಡೆಸಲಾಯಿತು. ದಂಪತಿಯ ಹಠಾತ್ ಸಾವಿನಿಂದ ಗ್ರಾಮದಲ್ಲಿ ಕತ್ತಲೆ ಆವರಿಸಿದೆ.
ಈ ಎರಡು ಕಥೆಗಳು ಬೇರೆ ಬೇರೆ ಸ್ಥಳಗಳಿಂದ ಬಂದಿದ್ದರೂ ಒಂದೇ ಅವಿನಾಭಾವ ಸಂಬಂಧ ಎಂಬಂತೆ ಪ್ರೀತಿಯನ್ನು ಪ್ರತಿಬಿಂಬಿಸುತ್ತಿವೆ. ಅಲ್ಲಿ ಒಬ್ಬರು ಇನ್ನೊಬ್ಬರಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂಬುದಕ್ಕೆ ಈ ಎರಡೂ ಜೋಡಿಯ ಸಾವು ನಿದರ್ಶನದಂತಿದೆ.