ಬೆಂಗಳೂರು : ನಾಯಕತ್ವದ ಗುಣ ಇರುವುದಕ್ಕೆ ನನ್ನನ್ನು ಹಲವು ರಾಜ್ಯಗಳ ಚುನಾವಣೆಗೆ ಕರೆಯುತ್ತಾರೆ ಎಂದು ಹೇಳುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯನವರ ಬಣ ಸಚಿವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಜಟಾಪಟಿ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನನ್ನ ನಾಯಕತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಪುನರುಚ್ಚರಿಸಿ ರಾಜಕೀಯ ವಿರೋಧಿಗಳಿಗೆ ಡಿಕೆಶಿ ಸಂದೇಶ ರವಾನಿಸಿದರು.
ಮನೆಯಲ್ಲಿ ಕುಳಿತುಕೊಳ್ಳಲು ಅಧ್ಯಕ್ಷರನ್ನಾಗಿ ನನ್ನನ್ನು ಮಾಡಿಲ್ಲ. ಯಾವುದೇ ಸ್ಥಾನದಲ್ಲಿ ಇದ್ದರೂ ನಾಯಕತ್ವ ವಹಿಸುತ್ತೇನೆ. ನನಗೆ ಫೇಸ್ ಇದೆ, ವೈಬ್ರೇಷನ್, ಶಕ್ತಿಯೂ ಕೂಡ ಇದೆ. ಹಾಗಾಗಿ ದೆಹಲಿ, ಬಿಹಾರ, ಕೇರಳ, ತಮಿಳುನಾಡು ಹೀಗೆ ಅನೇಕ ರಾಜ್ಯಗಳಿಗೂ ನನ್ನನ್ನು ಕರೆಯುತ್ತಿದ್ದಾರೆ ಎಂದು ಡಿಕೆಶಿ ಅಬ್ಬರಿಸಿದರು.
ಇನ್ನು ಇತ್ತೀಚೆಗೆ ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ವಿಚಾರವಾಗಿ ತಾವು ಬಿಜೆಪಿಗೆ ಹತ್ತಿರ ಆಗುತ್ತಿರುವುದಾಗಿ ಸುಳ್ಳು ಸುದ್ದಿ ಹರಿದಾಡುತ್ತಿದೆ.
ನಾನು ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ. ಕುಂಭ ಮೇಳಕ್ಕೆ ಹೋಗಿದ್ದು ನನ್ನ ನಂಬಿಕೆ. ಎಲ್ಲಾ ಧರ್ಮದ ಬಗ್ಗೆ ನಾನು ಅಪಾರ ಗೌರವ ಹೊಂದಿದ್ದೇನೆ. ಇಂತಹ ಊಹಾಪೋಹಗಳು ನನ್ನ ಹತ್ತಿರ ಸುಳಿಯುವುದೂ ಬೇಡ ಎಂದು ಡಿಕೆಶಿ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.




