ಮಂಡ್ಯ: ಜನರು ಎಲ್ಲಿ ಅಪೇಕ್ಷೆ ಪಡುತ್ತಾರೆಯೋ ಅಲ್ಲಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ಮಾರಮ್ಮ ದೇವಾಲಯ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಮರಳುವ ಸ್ಪಷ್ಟ ಸೂಚನೆ ನೀಡಿದ್ದಾರೆ.
ಕರ್ನಾಟಕ ರಾಜ್ಯವೇ ನನ್ನ ಪರಿಮಿತಿಯಾಗಿದೆ. ಜನ ಅಪೇಕ್ಷೆ ಪಡುವ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಉದ್ದೇಶವಿರಲಿಲ್ಲ. ಸಿ.ಎಸ್.ಪುಟ್ಟರಾಜು ಅವರನ್ನು ಅಭ್ಯರ್ಥಿಯಾಗಿಸಲು ಚಿಂತನೆ ನಡೆಸಿದ್ದೆವು.
ಆದರೆ ಅನಿವಾರ್ಯವಾಗಿ ನಾನೇ ಚುನಾವಣೆಗೆ ಸ್ಪರ್ಧೆ ಮಾಡಬೇಕಾಗಿ ಬಂದಿತು. ನಾನು ಸಂಸದನಾಗುತ್ತೇನೆ, ಕೇಂದ್ರ ಸಚಿವನಾಗುತ್ತೇನೆ ಎಂದು ಗೊತ್ತಿರಲಿಲ್ಲ ಎಂದರು.
ಜನರ ನಿರೀಕ್ಷಕೆ ತಕ್ಕಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.




