ಮುಧೋಳ: ಇನ್ನು 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತೆ. ಮುಂದಿನ ಸಿಎಂ ನಾನೇ ಆಗುತ್ತೇನೆ. ಜನಬಲದಿಂದ ನಾನು ಸಿಎಂ ಆಗೋದು ಪಕ್ಕಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶಿವಾಜಿ ಸರ್ಕಲ್‌ನಲ್ಲಿ ಮಾತನಾಡುತ್ತ ಸ್ವಪಕ್ಷೀಯ ವಿರುದ್ಧವೇ ಗುಡುಗಿದ ಯತ್ನಾಳ್, ಅಪ್ಪ- ಮಕ್ಕಳು ಇಬ್ಬರು ದುಡ್ಡು ನೀಡಿ ಸಿಎಂ ಆಗಲು ಹವಣಿಸಿಸುತ್ತಾರೆ.
ಆದರೆ ನಾನು ಜನಬಲದಿಂದ ಸಿಎಂ ಆಗುವುದು ನಿಶ್ಚಿತ. ಆಗ ಅಧಿಕಾರಿಗಳಿಗೆ ಸರಿಯಾದ ಪಾಠ ಕಲಿಸುವೆ ಎಂದು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ನಿಯತ್ತಿನ ಪ್ರಾಣಿ ಅಂದರೆ ಅದು ನಾಯಿ ಮಾತ್ರ. ನಾನು ಸನಾತನ ಹಿಂದು ಧರ್ಮದ ನಾಯಿ. ನಾನು ಭಾರತ ದೇಶದ ನಾಯಿ, ನಾನು ಪ್ರಧಾನಿ ನರೇಂದ್ರ ಮೋದಿ ಅವರ ನಾಯಿ. ನಾನು ಯಾವ ಮಕ್ಕಳ ಜೊತೆ ಅಡ್ಜಸ್ಟ್‌ಮೆಂಟ್ ಇಲ್ಲದ ಬಿಜೆಪಿ ನಾಯಿ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷ ನಾಯಕ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಯಾವುದೇ ಹುದ್ದೆ ಸಿಗದ ಕಾರಣದಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದರು.
ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ವಿರುದ್ದ ಕಟುಟೀಕೆಗಳನ್ನು ಮಾಡುತ್ತಿರುವ ಯತ್ನಾಳ್, ಅಸಮಧಾನಿತರ ಗುಂಪಿನೊಡನೆ ಗುರುತಿಸಿಕೊಂಡಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯಲಿದ್ದಾರೆ ಎಂಬ ಊಹಾಪೋಹ ಕೇಳಿಬಂದಿರುವ ಬೆನ್ನಲ್ಲೇ, ಯತ್ನಾಳ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.