ಗಾಂಧೀನಗರ: ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಏಕೆಂದರೆ ನನ್ನ ಜೀವನದ ಖಾತೆಯಲ್ಲಿ ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆಶೀರ್ವಾದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಗುಜರಾತ್‌ನ ನವಸಾರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಇಂದು ಗುಜರಾತ್ ಸಫಲ್ ಮತ್ತು ಗುಜರಾತ್ ಮೈತ್ರಿ ಎಂಬ ಎರಡು ಯೋಜನೆಗಳನ್ನು ಇಲ್ಲಿ ಪ್ರಾರಂಭಿಸಲಾಗಿದೆ. ಅನೇಕ ಯೋಜನೆಗಳ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ನಾವೆಲ್ಲರೂ ಮಹಿಳೆಯರಿಂದ ಸ್ಫೂರ್ತಿ ಪಡೆಯುವ ದಿನ. ಮಹಿಳೆಯರಿಂದ ಏನನ್ನಾದರೂ ಕಲಿಯುವ ದಿನ. ಇಂದು ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೆಮ್ಮೆಯಿಂದ ಹೇಳಬಲ್ಲೆ. ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೇಳಿದರೆ, ಇಡೀ ಟ್ರೋಲ್ ಸೈನ್ಯ ಎಚ್ಚರವಾಗುತ್ತದೆ ಎಂದು ನನಗೆ ತಿಳಿದಿದೆ.
ಆದರೂ ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪುನರಾವರ್ತಿಸುತ್ತೇನೆ. ಏಕೆಂದರೆ ನನ್ನ ಜೀವನದ ಖಾತೆಯಲ್ಲಿ ಕೋಟ್ಯಂತರ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಆಶೀರ್ವಾದವಿದೆ ಮತ್ತು ಈ ಆಶೀರ್ವಾದಗಳು ನಿರಂತರವಾಗಿ ಹೆಚ್ಚುತ್ತಿವೆ. ಅದಕ್ಕಾಗಿಯೇ ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೇಳುತ್ತೇನೆ ಎಂದಿದ್ದಾರೆ.
ಗುಜರಾತ್‌ನ ನವಸಾರಿಯಲ್ಲಿ ಜಿ-ಸಫಲ್ ಮತ್ತು ಜಿ-ಮೈತ್ರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶನಿವಾರ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಖ್ಪತಿ ದೀದಿಯರೊಂದಿಗೆ ಸಂವಾದ ನಡೆಸಿದರು.




