ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಭಾರತ ಕೇವಲ 22 ನಿಮಿಷಗಳಲ್ಲಿ ಸೇಡು ತೀರಿಸಿಕೊಂಡಿದೆ. ನನ್ನ ರಕ್ತನಾಳಗಳಲ್ಲಿ ರಕ್ತವಲ್ಲ, ಸಿಂಧೂರ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಏಪ್ರಿಲ್ 22 ರ ದಾಳಿಗೆ ಪ್ರತಿಕ್ರಿಯೆಯಾಗಿ, ನಾವು ಭಯೋತ್ಪಾದಕರ ಒಂಬತ್ತು ದೊಡ್ಡ ಅಡಗುತಾಣಗಳನ್ನು 22 ನಿಮಿಷಗಳಲ್ಲಿ ನಾಶಪಡಿಸಿದ್ದೇವೆ. ಸಿಂಧೂರವು ಬಂದೂಕಿನ ಪುಡಿಯಾಗಿ ಬದಲಾದಾಗ ಏನಾಗುತ್ತದೆ ಎಂದು ವಿಶ್ವದ ಮತ್ತು ದೇಶದ ಶತ್ರುಗಳು ನೋಡಿದ್ದಾರೆ ಎಂದು ಹೇಳಿದರು.
ಭಯೋತ್ಪಾದನೆಯ ವಿರುದ್ಧ ಹೋರಾಡಲು ಭಾರತ ಒಗ್ಗಟ್ಟಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ 140 ಕೋಟಿ ಭಾರತೀಯರನ್ನು ಕೆರಳಿಸಿದೆ. ಇದಕ್ಕೆ ಪ್ರತೀಕಾರವಾಗಿ ನಾವು ಭಯೋತ್ಪಾದನೆಯ ಹೃದಯಭಾಗದ ಮೇಲೆ ದಾಳಿ ಮಾಡಿದ್ದೇವೆ. ಸರ್ಕಾರ ಮಿಲಿಟರಿಗೆ ಮುಕ್ತ ಹಸ್ತ ನೀಡಿ ಮತ್ತು ಸಶಸ್ತ್ರ ಪಡೆಗಳು ಪಾಕಿಸ್ತಾನವನ್ನು ಮಂಡಿಯೂರುವಂತೆ ಮಾಡಿತು ಎಂದು ಪ್ರಧಾನಿ ಶ್ಲಾಘಿಸಿದರು.
ಸಿಂಧೂರವನ್ನು ಒರೆಸಲು ಹೊರಟವರು ಮಣ್ಣಿನಲ್ಲಿ ಹೂತುಹೋಗಿದ್ದಾರೆ. ಭಾರತದ ರಕ್ತ ಚೆಲ್ಲುವವರು ಪ್ರತಿ ಹನಿಗೂ ಬೆಲೆ ತೆತ್ತಿದ್ದಾರೆ.
ಭಾರತ ಮೌನವಾಗಿರುತ್ತದೆ ಎಂದು ಭಾವಿಸಿದ್ದವರು ಈಗ ತಮ್ಮ ಮನೆಗಳಲ್ಲಿ ಅಡಗಿಕೊಂಡಿದ್ದಾರೆ ಮತ್ತು ತಮ್ಮ ಶಸ್ತ್ರಾಸ್ತ್ರಗಳ ಬಗ್ಗೆ ಹೆಮ್ಮೆ ಪಡುವವರು ಈಗ ತಮ್ಮದೇ ಆದ ಅವಶೇಷಗಳ ಕೆಳಗೆ ಹೂತುಹೋಗಿದ್ದಾರೆ ಎಂದು ಹೇಳಿದರು.




