ಬೆಂಗಳೂರು: ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದ್ದು, ರಾಜ್ಯದಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರರು ಹೊಂದಿರುವ ಸ್ಥಾನಗಳನ್ನು ಪ್ರಶ್ನಿಸಿ, ವಂಶಪಾರಂಪರ್ಯ ರಾಜಕೀಯಕ್ಕೆ ಅವಕಾಶ ನೀಡಿದ್ದಕ್ಕಾಗಿ ಬಿಜೆಪಿ ನಾಯಕತ್ವವನ್ನು ಯತ್ನಾಳ್ ಟೀಕಿಸಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬೆಂಬಲಿಸಿ ಬಿಜೆಪಿ ಕಾರ್ಯಕರ್ತರು ಕಲಬುರಗಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಸುದ್ದಿಸಂಸ್ಥೆ ಎಎನ್ಐ ಜೊತೆ ಮಾನಾಡಿದ ಯತ್ನಾಳ್, ‘ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬದ ಪಕ್ಷವನ್ನಾಗಿ ಮಾಡಿಕೊಂಡಿರುವ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ನಾನು ಧ್ವನಿ ಎತ್ತುತ್ತೇನೆ. ಪ್ರಧಾನಿ ಮೋದಿ ಪ್ರತಿ ಸಾರ್ವಜನಿಕ ರ್ಯಾಲಿಯಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು ‘ಹೊಂದಾಣಿಕೆ’ ರಾಜಕೀಯವನ್ನು ಕೊನೆಗೊಳಿಸುವುದಾಗಿ ಯಾವಾಗಲೂ ಹೇಳುತ್ತಲೇ ಇದ್ದಾರೆ. ನಾನು ಕೂಡ ಅದಕ್ಕಾಗಿ ಧ್ವನಿ ಎತ್ತಿದ್ದೇನೆ ಮತ್ತು ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ. ಪಕ್ಷದಲ್ಲಿ ಯಡಿಯೂರಪ್ಪ ಕುಟುಂಬದ ಪ್ರಭಾವದ ಬಗ್ಗೆ ನಾನು ಬಿಜೆಪಿ ನಾಯಕತ್ವವನ್ನು ಪ್ರಶ್ನಿಸಿದೆ. ಯಡಿಯೂರಪ್ಪ ಸಂಸದೀಯ ಮಂಡಳಿ ಸದಸ್ಯ, ಅವರ ಕಿರಿಯ ಮಗ ರಾಜ್ಯಾಧ್ಯಕ್ಷ ಮತ್ತು ಶಾಸಕ. ಇದು ವಂಶಪಾರಂಪರ್ಯ ರಾಜಕೀಯವಲ್ಲವೇ? ನಾನು ಈ ಪ್ರಶ್ನೆಯನ್ನು ಹೈಕಮಾಂಡ್‌ಗೆ ಕೇಳಿದೆ’ ಎಂದರು.
‘ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಶಿವಮೊಗ್ಗದಲ್ಲಿ ನಡೆದ ಗಲಭೆ ಸಮಯದಲ್ಲಿ ಹಿಂದೂಗಳನ್ನು ಬೆಂಬಲಿಸಲಿಲ್ಲ ಅಥವಾ ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲಿಲ್ಲ. ಅವರ ಮಗ, ಸದ್ಯ ರಾಜ್ಯಾಧ್ಯಕ್ಷನಾಗಿದ್ದು ಅವರು ಕೂಡ ಎಂದಿಗೂ ಹಿಂದೂಗಳನ್ನು ಬೆಂಬಲಿಸಿಲ್ಲ. ಅದಕ್ಕಾಗಿಯೇ ನಾವು ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ ಮತ್ತು ಅದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ’ ಎಂದು ಹೇಳಿದರು.
‘ಮರಳಿ ಪಕ್ಷಕ್ಕೆ ಕರೆದುಕೊಳ್ಳುವಂತೆ ನಾನು ಯಾರನ್ನೂ ಬೇಡಿಕೊಳ್ಳುವುದಿಲ್ಲ. ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಮತ್ತು ಅವರು ಕ್ಷಮೆಯಾಚಿಸಲು ಬಯಸಿದರೆ, ಕ್ಷಮೆ ಕೇಳಬೇಕಾದವರು ನಾನಲ್ಲ, ಬದಲಿಗೆ ಅವರೇ. ನಾನು ಯಾವಾಗಲೂ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿಯಂತಹ ಬಿಜೆಪಿ ನಾಯಕರನ್ನು ಬೆಂಬಲಿಸಿದ್ದೇನೆ. ಪ್ರಧಾನಿ ಮೋದಿ ಒಳ್ಳೆಯ ನಾಯಕ, ಆದರೆ ಕೆಳ ಹಂತಗಳಲ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದು ಕರ್ನಾಟಕದಲ್ಲಿ ಪಕ್ಷಕ್ಕೆ ಹಾನಿ ಮಾಡುತ್ತದೆ’ ಎಂದು ಯತ್ನಾಳ್ ಹೇಳಿದರು.