ಮೈಸೂರು: ಇತ್ತೀಚೆಗಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ, ಇಂದು ಸಿಎಂ ಆಪ್ತ ಸಚಿವ ಹೆಚ್.ಸಿ.ಮಹದೇವಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ, ಹೈಕಮಾಂಡ್ ನಾಯಕರ ಭೇಟಿ ಬಳಿಕ ಸಾಲು ಸಾಲು ರಾಜ್ಯ ನಾಯಕರ ಭೇಟಿ ತೀವ್ರ ಕುತೂಹಲ ಮೂಡಿಸಿದೆ.
ಈ ಮಧ್ಯೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರ್ತಾರೆ. ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿಗಳು, ನಾನು ಸಿದ್ದರಾಮಯ್ಯ ಅವರ ಜೊತೆ ಸಚಿವನಾಗಿ ಇರುತ್ತೇನೆ. ಇದರಲ್ಲಿ ಬೇರೆ ಯಾವುದೇ ಬದಲಾವಣೆ ಪ್ರಶ್ನೆ ಇಲ್ಲ. 5 ವರ್ಷ ಸಿಎಂ ಆಗಿ ಇರ್ತಾರೋ, 3 ವರ್ಷ ಇರ್ತಾರೋ ಅದು ನನಗೆ ಗೊತ್ತಿಲ್ಲ. ಇದನ್ನು ನೀವು ಹೈಕಮಾಂಡ್ ಗೆ ಕೇಳಬೇಕು ಎಂದರು.
ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ನಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ವಿಪಕ್ಷ ನಾಯಕರು ನಮ್ಮ ಮೇಲಿನ ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ನಾನು ಈ ಬಗ್ಗೆ ಹಲವು ಬಾರಿ ಸ್ಪಷ್ಟ ಪಡಿಸಿದ್ದೇನೆ. ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಅವರವರ ಬೆಂಬಲಿಗರು ಅವರವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಕೂಗುವುದು ಸಹಜ. ಅದನ್ನೇ ಇಟ್ಟುಕೊಂಡು ಏನೋ ಬದಲಾವಣೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ ಎಂದರು.