ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ರಾಜಕಾರಣಿ, ಸಹಚರರೊಂದಿಗೆ ಮಲಗುವಂತೆ ಪತಿಯೇ ಪತ್ನಿಗೆ ಪೀಡಿಸುತ್ತಿದ್ದುದಲ್ಲದೇ ಆರು ಬಾರಿ ತಲಾಖ್ ನೀಡಿ, ಅಬಾರ್ಷನ್ ಮಾಡಿಸಿರುವಂತಹ ಘಟನೆ ನಡೆದಿದೆ.
ಪತಿಯ ಈ ವರ್ತನೆಯಿಂದ ರೋಸಿ ಹೋದ ಪತ್ನಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.ಸಂತ್ರಸ್ತೆ 2021 ರಲ್ಲಿ ಆರೋಪಿ ಯೂನಸ್ ಪಾಷಾನನ್ನು ವಿವಾಹವಾಗಿದ್ದಳು.
ಇದಾದ ನಾಲ್ಕು ತಿಂಗಳ ನಂತರ ಯೂನಸ್, ಆತನ ತಂದೆ ಚಿಂದ್ ಪಾಷಾ ಹಾಗೂ ತಾಯಿ ಪಹೀನ್ ತಾಜ್ ಸೇರಿಕೊಂಡು ಸಂತ್ರಸ್ತೆಗೆ ಹಿಂಸೆ ನೀಡಲು ಪ್ರಾರಂಭಿಸಿದ್ದಾರೆ.
ಈ ನಡುವೆ ಆಕೆ ಗರ್ಭಿಣಿಯೂ ಆಗಿದ್ದು, ಆಕೆಯ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದಲ್ಲದೇ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದಾರೆಂದು ಆರೋಪಿಸಲಾಗಿದೆ.
ಈ ನಡವಳಿಕೆಯನ್ನು ಪ್ರಶ್ನಿಸಿದ ಪತ್ನಿಗೆ ಗನ್ ಸೇರಿದಂತೆ ಮಾರಕ ಆಯುಧಗಳನ್ನು ತೋರಿಸಿ ಸಂತ್ರಸ್ಥೆಗೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದರು. 2023 ರಲ್ಲಿ ಸಂತ್ರಸ್ಥೆ ಮೇಲೆ ಗಂಭೀರ ಹಲ್ಲೆ ಮಾಡಿದ್ದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಯೂನಸ್‌ಗೆ ರೌಡಿಗಳು ಹಾಗೂ ರಾಜಕಾರಣಿಗಳ ನಂಟು ಇದ್ದು, ಪತ್ನಿಯನ್ನು ಅವರಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾನೆ ಎಂಬುದು ತಿಳಿದು ಬಂದಿದೆ. ಇದರಿಂದ ಸಂತ್ರಸ್ಥೆ ಭಯಗೊಂಡು ತಾಯಿಯ ಮನೆಗೆ ಹೋಗಿ ಅಲ್ಲಿ ವಾಸವಾಗಿದ್ದಾಳೆ.
ಇತ್ತೀಚೆಗೆ ಮಹಿಳೆ ತನ್ನ ಬಟ್ಟೆಗಳನ್ನು ವಾಪಸ್ ತರಲು ಪತಿಯ ಮನೆಗೆ ಹೋದಾಗ ಪಾಷಾ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಮನನೊಂದ ಸಂತ್ರಸ್ಥೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಬನಶಂಕರಿ ಠಾಣೆಯಲ್ಲಿ ದೂರು ನೀಡಿದ್ದಾರೆ.




