ಕನ್ನಡದ ಜನಪ್ರಿಯ ನಟ, ನಿರೂಪಕ ಸೃಜನ್ ಲೋಕೇಶ್ ಹೆಸರು ಕೇಳಿದ ತಕ್ಷಣ ನೆನಪಾಗುವುದೇ ನಗು. ಒಬ್ಬ ಮನುಷ್ಯ ಎಂತಹ ಕೆಲಸವನ್ನಾದರೂ ಮಾಡಬಹುದುಂತೆ ಆದರೆ ಇನ್ನೊಬ್ಬರ ಮುಖದಲ್ಲಿ ನಗು ತರುವುದು ಬಹಳ ಕಷ್ಟದ ಕೆಲಸವಂತೆ. ಇಂತಹ ಕೆಲಸವನ್ನು ಸೃಜನ್ ಲೋಕೇಶ್ ಮಾಡುತ್ತಿದ್ದಾರೆ.
ತಮ್ಮ ಮಾತುಗಳ ಮೂಲಕವೇ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಸೃಜನ್, ನಗುವಿಗಾಗಿ ವೇದಿಕೆಯನ್ನೇ ಈಗಾಗಲೇ ಸೃಷ್ಟಿಸಿದ್ದಾರೆ. ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮದ ಮೂಲಕ ನಗುವಿಗಾಗಿಯೇ ವೇದಿಕೆ ಸೃಷ್ಟಿಸಿರುವ ಸೃಜನ್ ಲೋಕೇಶ್, ನಗಿಸುವ ಕಲಾವಿದರಿಗೂ ಕೂಡ ಸುವರ್ಣಾವಕಾಶಗಳನ್ನು ನೀಡುತ್ತಿದ್ದಾರೆ. ಇನ್ನು ಇತರ ಕಾರ್ಯಕ್ರಮಗಳಲ್ಲಿಯೂ ನಗು ನಗುತ್ತಲೇ ಕಾಣಿಸಿಕೊಳ್ಳುವ ಸೃಜನ್, ಯಾವುದೇ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವ ಅಥವಾ ವಿವಾದಗಳ ಬಗ್ಗೆ ಪ್ರತಿಕ್ರಿಯಿಸುವ ವ್ಯಕ್ತಿಯಲ್ಲ.
ಆಪ್ತರು, ಸ್ನೇಹಿತರು, ಚಿತ್ರರಂಗ ಹೀಗೆ ಎಂತಹ ಮಹತ್ವದ ಬೆಳೆವಣಿಗೆಯಾದರೂ ಸಹ ಸೃಜನ್ ವಿವಾದಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ಸೃಜನ್ ತಮ್ಮ ಬಗ್ಗೆ ವಿವಾದಗಳನ್ನು ಮಾಡುವವರ ಬಗ್ಗೆ ಮಾತನಾಡಿದ್ದಾರೆ. ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನನ್ನ ಬಗ್ಗೆ ವಿವಾದಗಳು ಬಂದಾಗ ನಾನು ಅದನ್ನು ನಿರ್ಲಕ್ಷಿಸಿ ಬಿಡುತ್ತೇನೆ ಅಷ್ಟೇ.
ಯಾಕೆಂದರೆ ನಾನೇನೋ ಮಾಡಿದಾಗ ನನ್ನ ಸ್ನೇಹಿತನಾಗಿ ಹೇಳಿದರೆ ಕೇಳಿಸಿಕೊಳ್ಳುತ್ತೇನೆ. ಆದರೆ ಪರಿಚಯನೇ ಇಲ್ಲದೇ ಇದ್ದವರು ಕಮೆಂಟ್ ಮಾಡಿದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ, ನಾನ್ಯಾಕೆ ಗೊತ್ತಿಲ್ಲದವರಿಗೆ ಪ್ರಾಮುಖ್ಯತೆ ಕೊಡಲಿ. ಕೆಲವೊಂದು ಸಾರಿ ವೈಯಕ್ತಿಕ ವಿಚಾರವನ್ನು ಮಾತನಾಡುವ ಅಧಿಕಾರ ಯಾರಿಗೂ ಇರುವುದಿಲ್ಲ. ಯಾಕೆಂದರೆ ಅದರ ಹಿಂದೆ ಏನಾಗಿರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ’ ಎಂದರು. ‘ಕೆಲವೊಂದು ಗೊತ್ತಿಲ್ಲದ ವಿಚಾರವನ್ನು ಇದು ಹೀಗೆ ಇರಬಹುದು ಅಂದುಕೊಂಡು ಬಿಟ್ಟರೆ ಅದು ಮೂರ್ಖತನ.
ಸುಮ್ಮನೆ ಸಂಬಂಧ ಕಟ್ಟಿ, ಇವರೇ ಇರಬಹುದು, ಇವರೇ ಇರಬಹುದು ಅಂದರೆ ಹೇಗೆ ಗೊತ್ತು ಅವರಿಗೆ. ನನಗೇನು ಹೆಂಡತಿ ಮಕ್ಕಳು ಇಲ್ವಾ? ಅವರಿಗೆ ಬೇಜಾರಾಗುತ್ತದೆ ಎನ್ನುವ ಪರಿಜ್ಞಾನ ಬೇಡವಾ? ನನ್ನ ಬಗ್ಗೆ ನಿರ್ಧಾರ ಮಾಡಲು ನೀವು ಯಾರು? ನಿಮ್ಮ ಹತ್ತಿರ ಏನಾದರೂ ಸಾಕ್ಷಿ ಇದೆಯಾ? ಮತ್ತೆ ಹೇಗೆ ಒಂದು ಸಂಬಂಧನಾ ಹಾಳು ಮಾಡುತ್ತೀರಿ. ಹೀಗಾಗಿ ನಾನು ವಿವಾದಗಳನ್ನು ನಿರ್ಲಕ್ಷಿಸಿ ಬಿಡುತ್ತೇನೆ ಅಷ್ಟೇ’ ಎಂದು ಹೇಳಿದರು. ‘ನಾನು ಯಾವುದಕ್ಕೂ ಉತ್ತರ ಕೊಡುವುದಿಲ್ಲ. ನಾಳೆ ದಿನ ಮತ್ತೆ ಯಾರೋ ಏನೋ ಮಾತನಾಡುತ್ತಾರೆ ಮತ್ತೆ ಅದಕ್ಕೆ ಉತ್ತರ ಕೊಟ್ಟುಕೊಂಡು ಕೂರಬೇಕಾಗುತ್ತದೆ. ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು ಎನ್ನುವುದು ನನ್ನ ಧ್ಯೇಯ. ನಮ್ಮ ಅಮ್ಮ ಬೈದರೆ ಗಮನ ಕೊಡುತ್ತೇನೆ. ಯಾಕೆಂದರೆ ಅವರಿಗೆ ಅಧಿಕಾರ ಇದೆ.
ನನ್ನ ಹೆಂಡತಿ, ನನ್ನ ಅಕ್ಕ, ನನ್ನ ಮಕ್ಕಳು, ನನ್ನ ಸ್ನೇಹಿತರು, ನನ್ನ ಹಿತೈಷಿಗಳು, ನನ್ನ ಶತ್ರುಗಳು ಎಲ್ಲರಿಗೂ ನನ್ನ ಕೇಳುವ ಅಧಿಕಾರ ಇದೆ. ಯಾಕೆಂದರೆ ಅವರಿಗೊಂದು ಸ್ಥಾನ ಕೊಟ್ಟಿದ್ದೇನೆ. ನನ್ನ ಜೀವನದಲ್ಲಿ ಅವರಿಗಾಗಿ ಒಂದು ಸ್ಥಾನ ಇದೆ. ಹೀಗಾಗಿ ಅವರು ಕೇಳಬಹುದು. ಮುಂಚೆ ಒಬ್ಬರ ಬಗ್ಗೆ ಮಾತನಾಡಬೇಕು ಅಂದರೆ ಹತ್ತು ಸಾರಿ ಯೋಚನೆ ಮಾಡುತ್ತಿದ್ದೇವು. ಈಗ ಯಾರು ಯಾರ ಬಗ್ಗೆ ಬೇಕಾರದೂ ಏನೂ ಬೇಕಾದರೂ ಮಾತನಾಡಬಹುದು. ನಾನು ಕೇಳುವುದು ಇಷ್ಟೊಂದು ಹದಗೆಟ್ಟು ಹೋಗಿದೆಯಾ?’ ಎಂದು ಸೃಜನ್ ಲೋಕೇಶ್ ಪ್ರಶ್ನಿಸಿದ್ದಾರೆ.




