Ad imageAd image

ಅಂಬೇಡ್ಕರ್ ರವರು ನಮ್ಮೂರಿಗೆ ಬಂದಾಗ ನನಗೆ 8 ವರ್ಷಗಳು :ಟೋಪಣ್ಣ ಕೊಮಟಿ

Bharath Vaibhav
ಅಂಬೇಡ್ಕರ್ ರವರು ನಮ್ಮೂರಿಗೆ ಬಂದಾಗ ನನಗೆ 8 ವರ್ಷಗಳು :ಟೋಪಣ್ಣ ಕೊಮಟಿ
WhatsApp Group Join Now
Telegram Group Join Now

ಬೆಳಗಾವಿ: ಅಂಬೇಡ್ಕರ್ ರವರು ನಮ್ಮೂರಿಗೆ ಬಂದಾಗ ನನಗೆ 8 ವರ್ಷಗಳು. ನಮ್ಮ‌ ತಂದೆ ಅವರೂಟ್ಟಿಗೆ ನೇರ ಸಂಪರ್ಕದಲ್ಲಿದ್ದರು. ಧಮ್ಮದೀಕ್ಷಾ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಭಾಗವಹಿಸಿದ ಹತ್ತೆ-ಹತ್ತು ಮಂದಿ ಜನರಲ್ಲಿ ನಮ್ಮ ತಂದೆಯು ಒಬ್ಬರು….’ ಹೀಗೆ “ಟೋಪಣ್ಣ ಕೊಮಟಿ”ಯವರು ಇಂತಹ ರೋಚಕ ಘಟನೆಗಳನ್ನು ಹೇಳುತ್ತಿದ್ದರೆ…

ನಾನು ಅವರ ಕಣ್ಣುಗಳನ್ನೇ ದಿಟ್ಟಿಸಿ ನೋಡುತ್ತಿದ್ದೆ.ಅಂಬೇಡ್ಕರ್ ಅವರನ್ನು ನೇರವಾಗಿ ನೋಡಿದ ಈ ಕಣ್ಣುಗಳು ಆದಷ್ಟು ಸಾರ್ಥಕವಾದವು;
ಅವರ ಪಾದಗಳನ್ನು ಸ್ಪರ್ಶಿಸಿದ ಈ ಕೈಗಳು ಆದಷ್ಟು ಪವಿತ್ರವಾದವು; ಅವರ ದೇಹದ ಮುಂದೆ ಬಾಗಿ ಆಶೀರ್ವಾದ ಪಡೆದ ಈ ದೇಹವು ಅದೆಷ್ಟು ಪಾವನವಾದದು; ಎಂದೆನಿಸಿ, ಐದು ಗಂಟೆಗಳು ಅವರ ಮುಂದೆ ನಾವು ವಿನಮ್ರವಾಗಿ ಕುಳಿತು ಅವರು ಹೇಳಿದ್ದನ್ನೆಲ್ಲ ಮೌನವಾಗಿ ಕೇಳಿಸಿಕೊಂಡೆವು…

ಅಂಬೇಡ್ಕರ್ ಅವರನ್ನು ನೇರವಾಗಿ ಕಂಡು ಬದುಕಿದ್ದ, ಒಂದು ಶೋಷಿತ ಸಮುದಾಯ ಮತ್ತು ಮುಸ್ಲಿಂ ಸಮುದಾಯದ ಎರಡು ಕುಟುಂಬಗಳನ್ನು ನಾವು ನೇರವಾಗಿ ಭೇಟಿಯಾದೆವು

ಸತತವಾಗಿ 5 ಗಂಟೆಗಳು ನಮ್ಮೊಟ್ಟಿಗೆ ಅವರು ಮಾತನಾಡಿದರು. ಐದು ಗಂಟೆಗಳಲ್ಲಿ 75 ವರ್ಷದ ಇತಿಹಾಸದೆಡೆಗೆ ನಮ್ಮನ್ನು ಕೊಂಡೋದರು.

ಅಂಬೇಡ್ಕರ್ ಅವರನ್ನು ನೇರವಾಗಿ ನೋಡಿದಾಗ ನಿಮಗಾದ ಅನುಭವವೇನು? ಎಂದು ಕೇಳಿದೆ.
‘ಯಪ್ಪಾ..! ಅಂತಹ ನೋಟ, ಆ ಗಟ್ಟಿ ಧ್ವನಿ, ಎತ್ತರದ ದೇಹ, ಸ್ಪಟಿಕದಂತಹ ಮಾತುಗಳು, ಹಸನ್ಮುಖಿ, ಧೀಮಂತ ನಡಿಗೆ, ಅವರ ತಾಯ್ತನ, ಕಾಳಜಿ, ಬಡವರ ಮೇಲಿನ ಪ್ರೀತಿ, ಅಬ್ಬಬ್ಬಾ! ದೇವರನ್ನು ನೋಡಲು ಹೋಗುತ್ತಿದ್ದವರ ಪಾಲಿಗೆ, ದೇವರೇ ಎದುರಾಗಿ ಬಂದರೆ ಹೇಗಿರುತ್ತದೆ? ಹಾಗಿತ್ತು ನಮ್ಮ ಊರಿನ ಜನರ ಸಂಭ್ರಮ. ಎಂದು ತುಂಬಾ ಭಾವುಕರಾಗಿ ತಮ್ಮ ಮಾತುಗಳನ್ನು ಆರಂಭಿಸಿದರು.

ಅವತ್ತು ಅಂಬೇಡ್ಕರ್ ರವರು ನಮಗೆಲ್ಲಾ ಬೈದ್ರು. ಒಂದು ತಾಸು ಬೈದ್ರು. ‘ನಿಮಗೆಲ್ಲಾ ಬುದ್ಧಿ ಇಲ್ವಾ? ನನ್ನ ಜಯಂತಿಯನ್ನು ಏಕೆ ಮಾಡ್ತೀರಾ? ನನ್ನ ಜಯಂತಿ ಮಾಡುವ ಬದಲಿಗೆ, ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಅವರನ್ನು ದೊಡ್ಡ ವಿದ್ಯಾವಂತರನ್ನಾಗಿ ಮಾಡಿ. ಶಿಕ್ಷಣ ನಮ್ಮೆಲ್ಲರ ಬಹುದೊಡ್ಡ ಆಸ್ತಿ. ಶಿಕ್ಷಣವನ್ನು ನಿಮ್ಮ ಮಕ್ಕಳಿಂದ ಎಂದೂ ವಂಚಿಸಬೇಡಿ’ ಎಂದು ಒಂದು ತಾಸು ಬೈದ್ರು. ‘ಶಿಸ್ತುಬದ್ಧವಾಗಿರಿ, ಒಳ್ಳೆಯ ಬಟ್ಟೆಯನ್ನು ತೊಡಿ. ಅನ್ಯಾಯದ ವಿರುದ್ಧ ನೀವು ತಲೆತಗ್ಗಿಸಬೇಡಿ. ನಾನು ನಿಮ್ಮ ಮುಂದೆ ಇನ್ನೂ ಜೀವಂತವಾಗಿದ್ದೇನೆ. ನನ್ನ ಜಯಂತಿಯನ್ನು ದುಂದು ವೆಚ್ಚದಲ್ಲಿ ಏಕೆ ಮಾಡುತ್ತೀರಿ’. ಎಂದು ವಿವೇಕ ಹೇಳಿದರು. ಊರಿನ ಜನ ತುಂಬಾ ಮೌನಿಗಳಾದರು.

ಅವತ್ತು ಇಡೀ ಊರಿಗೆ ಊರೇ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದರು. ಆ ದಿನ ಅಂಬೇಡ್ಕರ್ ಅವರು ಅಚಾನಕ್ಕಾಗಿ ಪೆರಿಯಾರ್ ರಾಮಸ್ವಾಮಿ ನಾಯಕರವರನ್ನು ಭೇಟಿಯಾಗಲು ನಮ್ಮೂರಿನ ಮಾರ್ಗವಾಗಿ ‘ಮದ್ರಾಸಿಗೆ’ ಹೊರಟಿದ್ದರು. ನಮ್ಮ ಊರು ರೈಲ್ವೆ ಕ್ರಾಸಿಂಗ್ ಇರೋ ಒಂದು ಸ್ಟೇಷನ್. ಕಲ್ಲಿದ್ದಲನ್ನು ತುಂಬಿ ಸರಿಪಡಿಸಿಕೊಂಡು ಹೊರಡಲು ನಾಲ್ಕು ತಾಸು ವಿಶ್ರಮಿಸಿ ಹೊರಡಬೇಕು. ರೈಲ್ವೆ ನಿಲ್ದಾಣದೊಳಗೆ ಚಹಾದ ಅಂಗಡಿ ನಡೆಸುವ ನಮ್ಮದೇ ಊರಿನ “ದಿಲ್ದಾರ್ ಸಾಬ್” ಓಡಿ ಬಂದು, ಅಂಬೇಡ್ಕರ್ ಅವರು ಈ ರೈಲ್ವೆ ಭೋಗಿಯಲ್ಲಿದ್ದಾರೆ ಬನ್ನಿ ಎಂದು ಕೂಗಿಕೊಂಡರು. ಇಡೀ ಊರಿಗೆ ಊರೇ ಆ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿತು. ನಮ್ಮ ಉಲ್ಲಾಸ, ಉತ್ಸಾಹವನ್ನು ನೋಡಿ, ಅಂಬೇಡ್ಕರ್ ಅವರು ನಕ್ಕು ಭೋಗಿಯಿಂದ ಕೆಳಗಿಳಿದು, ‘ನಡಿರಿ; ನಾನೇ ನಿಮ್ಮ ಮನೆಗಳ ಕಡೆ ಬರುತ್ತೇನೆ’, ಎಂದು ತಮ್ಮ ಪವಿತ್ರ ಪಾದಗಳನ್ನು ನಮ್ಮ ಊರಿನ ಮಣ್ಣಿಗೆ ಸ್ಪರ್ಷಿಸಿದರು. ನಾವೆಲ್ಲ ಗಾಬರಿಗೊಂಡು ಎಲ್ಲಿಗೆ ಕರೆದುಕೊಂಡು ಹೋಗುವುದು?. ನಮ್ಮ ಯಾರ ಮನೆಯೂ ಕೂಡ ನಾಲ್ಕು ಜನರು ಕೂರುವಷ್ಟು ಸುಸ್ಥಿತಿಯಲ್ಲಿಲ್ಲ. ನಮ್ಮ ಮನೆಗಳೆಲ್ಲ ಜೋಪಡಿಯ ರೂಪದಲ್ಲಿವೆಯೆಂದು, ಚಿಂತೆಗೀಡಾದವು. ರೈಲ್ವೆ ಸ್ಟೇಷನ್ ಎದುರಿಗಿದ್ದ ನಿಜಾಮನ ಬಿಲ್ಡಿಂಗ್ ಹತ್ತಿರ ಅವರೇ ಬಂದು ಕುಳಿತು, ಕೆಲವು ತಾಸು ನಮ್ಮೊಟ್ಟಿಗೆ ಕಾಲ ಕಳೆದರು. ನಮ್ಮನ್ನೆಲ್ಲ ನೋಡಿ ಸಂತೋಷ ಪಟ್ಟರು. ತಮ್ಮ ಜಯಂತಿಯನ್ನು ನಿಲ್ಲಿಸುವಂತೆ ಕರೆ ಕೊಟ್ಟರು. ಆದರೆ ನಾವು ಅವರು ನಮ್ಮ ಊರಿಗೆ ಕಾಲಿಟ್ಟ ದಿನವನ್ನೇ ಅವರ ಹುಟ್ಟು ಹಬ್ಬದ ದಿನವನ್ನಾಗಿ ಇಂದಿಗೂ ಕೂಡ ಆಚರಿಸುತ್ತಿದ್ದೇವೆ.

ನಮ್ಮ ತಂದೆಯವರಾದ “ತುಳಸಿರಾಮ್ ಕೊಮಟಿ” ಅವರು ಒಬ್ಬ ಗಾರೆ ಮೇಸ್ತ್ರಿ. ಗಾರೆ ಕೆಲಸ ಮಾಡಿಕೊಂಡು ಅಂಬೇಡ್ಕರ್ ಅವರ ನೇರ ಸಂಪರ್ಕದಲ್ಲಿದ್ದರು. ವಿದ್ಯೆ ಇಲ್ಲ. ಅವರ ಎಲ್ಲಾ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು.

1956 ರಲ್ಲಿ ನಾಗಪುರದಲ್ಲಿ ನಡೆದ ಧಮ್ಮದೀಕ್ಷಾ ಕಾರ್ಯಕ್ರಮಕ್ಕೆ ಕರ್ನಾಟಕದಿಂದ ಭಾಗವಹಿಸಿದ ಹತ್ತೆ-ಹತ್ತು ಮಂದಿ ಜನರಲ್ಲಿ ನಮ್ಮ ತಂದೆಯ ಕೂಡ ಒಬ್ಬರು. ಅಂಬೇಡ್ಕರ್ ರವರು ನಮ್ಮ ತಂದೆಗೆ ಧಮ್ಮದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರಪತ್ರ ಕಳುಹಿಸಿದ್ದರು ಎಂದು, 75 ವರ್ಷಗಳ ಹಳೆಯದಾದ ಕರಪತ್ರವನ್ನು ನಮ್ಮ ಕೈಗಿತ್ತರು.

‘ದೀಕ್ಷಾ ಕಾರ್ಯಕ್ರಮಕ್ಕೆ ಭಾಗವಹಿಸಬೇಕಾದರೆ “ಒಂದು ರೂಪಾಯಿ” ನೊಂದಣಿ ಶುಲ್ಕ ನೀಡಿ ನೊಂದಾಯಿಸಿಕೊಳ್ಳಬೇಕಿತ್ತು. ಅಲ್ಲಿ ಎಲ್ಲಾ ರಾಜ್ಯದ ಜನರಿಗೂ ಜಿಲ್ಲಾ ವಾರು ಟೆಂಟ್ ಗಳನ್ನು ನಿರ್ಮಾಣ ಮಾಡಲಾಗಿತ್ತು. ಅಂದು ಕರ್ನಾಟಕದ ಟೆಂಟಿನಲ್ಲಿ ಕೇವಲ ಹತ್ತು ಜನ ಮಾತ್ರವೇ ಇದ್ದರು. ನಮ್ಮ ತಂದೆ ಬಡತನದ ಕಾರಣದಿಂದ, ಬುತ್ತಿ ಕಟ್ಟಿಕೊಂಡು, 8 ದಿನಗಳ ಕಾಲ ಸತ್ತಿ ಬಳಸಿ, ರೈಲು ಪ್ರಯಾಣ ಮಾಡಿ, ತುಂಬಾ ತ್ರಾಸಿನಲ್ಲಿ, ಅಲ್ಲಿಗೆ ಭಾಗವಹಿಸಿದ್ದರು. ನಮ್ಮದು ಅಂಬೇಡ್ಕರ್ ಅವರೊಂದಿಗೆ ಬುದ್ಧ ಧರ್ಮಕ್ಕೆ ನಡೆದ ಕುಟುಂಬ. ಅಂದಿನಿಂದಲೂ ನಾವು ಬುದ್ಧನ ಧಮ್ಮದಲ್ಲಿಯೇ ಸುಖ ನೆಮ್ಮದಿಯಲ್ಲಿದ್ದೇವೆ. ನಮ್ಮ ತಂದೆಯವರ ಪ್ರಭಾವದಿಂದ ನಮ್ಮ ಇಡೀ ಹಳ್ಳಿ ಬೌದ್ಧಾಚರಣೆಯಲ್ಲಿ ಸಾಗುತ್ತಿದೆ’.

ನಾನು ಅವರನ್ನು “ನಿಮ್ಮದು ಪವಿತ್ರ ಜೀವನ” ಎಂದೆ.
ಕಣ್ಣಂಚಲ್ಲಿ ನೀರು ತುಂಬಿಕೊಂಡು, ಅಂಬೇಡ್ಕರ್ ಅವರ ಭಾವಚಿತ್ರದಕಡೆ ನೋಡಿದರು. ನನ್ನ ಕಣ್ಣುಗಳೂ ಕೂಡ ತುಂಬಿಕೊಂಡವು. ಅಂಬೇಡ್ಕರ್ ರವರು ಆ ಊರಿಗೆ ಬಂದಾಗ ಅವರ ತಂದೆಯವರ ನೇತೃತ್ವದಲ್ಲಿ ಇಡೀ ಊರಿನ ಜನ ತಗೆಸಿಕೊಂಡ ಫೋಟೋ, ಅಲ್ಲಿ ಬಹುತೇಕ ಮನೆಗಳ ಗೋಡೆಯಲ್ಲಿ ನೇತಾಡುತ್ತಿದ್ದವು. ಅದಲ್ಲದೆ ಊರ ಮಧ್ಯ ಭಾಗದಲ್ಲಿ ಆ ಫೋಟೋ ವನ್ನುಒ ದೊಡ್ಡ ಕಟೌಟ್ ಮಾಡಿ ನಿಲ್ಲಿಸಲಾಗಿದೆ. ‘ತುಳಸಿರಾಮ್ ಕೊಮಟಿ’ ರವರ ಸವಿ ನೆನಪಿನಲ್ಲಿ ಅಲ್ಲೊಂದು ವೇದಿಕೆ ನಿರ್ಮಿಸಿ, ಪ್ರತಿ ವರ್ಷ ಅಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಅಂಬೇಡ್ಕರ್ ಅವರು ಬಂದು ಕುಳಿತಿದ್ದ ಜಾಗದಲ್ಲಿ, ಇಂದು ಸ್ಮಾರಕ ನಿರ್ಮಿಸಲಾಗಿದೆ. ಮತ್ತು ಅಂಬೇಡ್ಕರ್ ಅವರು ಆ ಊರಿಗೆ ಬಂದ ಸವಿನೆನಪಿನಲ್ಲಿ 20 ಎಕರೆ ವಿಸ್ತೀರ್ಣದ ಜಾಗದಲ್ಲಿ ಸರ್ಕಾರವು ಪ್ರವಾಸಿಗರನ್ನು ಸೆಳೆಯುವಂತಹ ಪ್ರಯೋಗಾತ್ಮಕ ಕೆಲಸಗಳು ಕೂಡ ನಡೆಯುತ್ತಿವೆ.

ಅಂಬೇಡ್ಕರ್ ಅವರ ಬಗ್ಗೆ ನಿಮ್ಮ ತಂದೆ ಏನು ಹೇಳುತ್ತಿದ್ದರು? ಎಂದು ಕೇಳಿದೆ. ಅವರು ಒಂದಷ್ಟು ರೋಮಾಂಚನಕಾರಿ ಘಟನೆಗಳನ್ನು ವಿವರಿಸಿದರು. ಅದನ್ನು ನಾನು ಪುಸ್ತಕದಲ್ಲಿಯೇ ಬರಿಯುವೆ.

ಅವರು ನಮಗೊಂದಿಷ್ಟು ಅಮೂಲ್ಯ ದಾಖಲೆಗಳನ್ನು ನೀಡಿದರು. ‘ಹೂ ಆರ್ ದಿ ಸೂದ್ರಾಶ್’ ನ ಒರಿಜಿನಲ್ ಕೃತಿಯನ್ನು ನೋಡಿದೆ. ಬಾಬಾ ಸಾಹೇಬರು ತೀರಿಕೊಂಡ ತಿಂಗಳಿನಲ್ಲಿಯೇ ಮುದ್ರಿಸಿದ “ಪ್ರಭುದ್ಧ ಭಾರತ”ದ ಮೂಲ ಪ್ರತಿಯನ್ನು ವೀಕ್ಷಿಸಿ, ಅಂಬೇಡ್ಕರ್ ಅವರ ಕಾಲದ ಬಂಟಿಂಗ್ಸ್, ಕೆಲವು ಕಾಗದ ಪತ್ರಗಳು, ಬರಹಗಳ ವರ್ಜಿನಲ್ ಪ್ರತಿಗಳನ್ನು ಸ್ಪರ್ಶಿಸಿ ಧನ್ಯನಾದೆ. ಯಾವ ಪುಸ್ತಕದಲ್ಲಿಯೂ ಸಿಗದ ಕೆಲವು ಅಪರೂಪದ ಮಾಹಿತಿಗಳು, ಅಮೂಲ್ಯ ದಾಖಲಾತಿಗಳನ್ನು ನಾವು ಪಡೆದವು. ನಮ್ಮ ಈ ಕ್ಷೇತ್ರ ಭೇಟಿ ಅತ್ಯಂತ ಅರ್ಥಪೂರ್ಣ ಎಂದೆನಿಸಿತು. ಈ ತಲೆಮಾರಿನ ಅಂಬೇಡ್ಕರ್ ಅವರು ಅನುಯಾಯಿಗಳ ವಿಳಾಸ ಕೂಡ ನಮಗೆ ದೊರೆಯಿತು.

ಬಾಬಾ ಸಾಹೇಬರು ಈ ನಾಡಿನ 10 ಸ್ಥಳಗಳಿಗೆ ಬಂದಿದ್ದಾರೆ ಎಂಬ ಮಾಹಿತಿ ಇದೆ ಇನ್ನು ಉಳಿದ 9 ಸ್ಥಳಗಳ ಕಡೆ ನಾವು ಭೇಟಿ ನೀಡಬೇಕಾಗಿದೆ

ಬಾಬಾ ಸಾಹೇಬರು ಬದುಕಿದ ಒಂದೊಂದು ಕ್ಷಣವೂ ಕೂಡ ಈಗ ಮಹಾಪೂರ್ಣವೇ. ಅವರ ಭೇಟಿಗಳು ಈಗ ಐತಿಹಾಸಿಕವೆ. ಒಮ್ಮೆ ನೀವು ಕೂಡ ಈ ಸ್ಥಳಕ್ಕೆ ಹೋಗಿ ಬನ್ನಿ. ಅಂದಹಾಗೆ ಆ ಸ್ಥಳದ ಹೆಸರು “ವಾಡಿ” ಚಿತ್ತಾಪುರ ತಾಲೂಕು: ಗುಲ್ಬರ್ಗ ಜಿಲ್ಲೆ!

ನಮ್ಮ ಮುಂದೆ ಕುಳಿತಿರುವವರು “ತೋಪಣ್ಣ ಕುಮಟಿ” ಈಗ ಅವರಿಗೆ 82 ವರ್ಷಗಳು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆ ಊರಿಗೆ ಬಂದಿದ್ದಾಗ ಅವರಿಗೆ “ಎಂಟು” ವರ್ಷಗಳು, ಸಾಧ್ಯವಾದರೆ ನೀವು ಕೂಡ ಅವರನ್ನು ಭೇಟಿ ಮಾಡಿ. ಇನ್ನು ಕೆಲವೆ ಕೆಲವು ವರ್ಷಗಳಲ್ಲಿ ಈ ತಲೆ ಮಾರನ್ನು ನಾವು ಕಳೆದುಕೊಳ್ಳಲಿದ್ದೇವೆ. ಬಹುಶಹ ಆ ಊರಿನಲ್ಲಿ ಅಂಬೇಡ್ಕರ್ ಅವರನ್ನು ನೋಡಿದ ಕೊನೆಯ ಕೊಂಡಿ ಇವರು. ಅವರಿಗೆ ಸಂತೋಷವಂತು ಖಂಡಿತವಾಗಿಯೂ ಆಗುತ್ತದೆ.

ಕೊನೆಯದಾಗಿ ಅಂಬೇಡ್ಕರ್ ಅನುಯಾಯಿಗಳಿಗೆ ನೀವು ಏನನ್ನು ಹೇಳಲು ಬಯಸುತ್ತೀರಿ.‌? ಎಂದು ಕೇಳಿದೆ.
‘ನಾನು ಏನನ್ನು ಹೇಳಲು ಬಯಸುವುದಿಲ್ಲ. ಅವರು; ಅಂಬೇಡ್ಕರ್ ಅವರು ಹೇಳಿರುವುದನ್ನೇ ಪಾಲಿಸಲಿ’ ಎಂದರು. ಇದು ಅತ್ಯಂತ ಮೌನ ಮತ್ತು ಗಂಭೀರವೆನಿಸಿತು. ಕೊನೆಯದಾಗಿ, ನನ್ನ ಕಣ್ಣುಗಳು ತುಂಬಿ ಬಂದವು. ಪಕ್ಕದಲ್ಲಿ ಕುಳಿತಿದ್ದ ಸ್ನೇಹಿತ ಚಂದ್ರಕಾಂತ್ ಮತ್ತು ಶ್ರೀನಿವಾಸ್ ಕಂದೇಗಾಲ ಮತ್ತು ಗಂಗಾಧರ್ ರವರನ್ನು ನೋಡಿದೆ. ಅಂಬೇಡ್ಕರ್ ಅವರು ತಿರುಗಾಡಿದ ಆ ಊರಿನ ಜಾಗಗಳಲ್ಲಿ ನಾವು ಕೂಡ ತಿರುಗಾಡಿದೆವು. ಆ ಮೈಸೂರು ಭಾಗದಲ್ಲಿ ರುವಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗದಿದ್ದರೂ ಬೌದ್ಧಿಕವಾಗಿ ಮತ್ತು ಪ್ರಾಮಾಣಿಕವಾಗಿ ನಮಗಿಂತ ಹೆಚ್ಚು ಅಂಬೇಡ್ಕರ್ ಅವರ ವಿಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಮಾನಸಿಕವಾಗಿ ಬೆಳೆದಿದ್ದಾರೆ. ಅಲ್ಲಿ ತಮ್ಮ ಮನೆಯ ಮಾತು.

ಅದರೂ ಯಾವುದೋ ಮನಸ್ಸಿಗೆ ನಿಲುಕಲಾಗದ ಭಾವ. ದುಗಡ. ವಿಪರೀತ ಮಾನವೀಯ ಮೌಲ್ಯಗಳು ಒಳಗೊಳಗೆ ಕಾಣಿಸಿಕೊಂಡವು. ಅಲ್ಲೊಂದಷ್ಟು ಜನ ಯುವಕರು ನಮ್ಮನ್ನು ಬಂದು ಪ್ರೀತಿಯಿಂದ ನಡೆಸಿಕೊಂಡರು. ಉಪಚರಿಸಿದರು. ಒಬ್ಬರೂ ಪರಿಚಯವಿಲ್ಲದ ಆ ಊರಿನಲ್ಲಿ ಅಂಬೇಡ್ಕರ್; ಅವರ ಹೆಸರನ್ನು ಹೇಳುತ್ತಿದ್ದಂತೆ ನೂರಾರು ಜನರು, ನೂರಾರು ವರ್ಷಗಳಿಂದ ಜೊತೆಗೆ ಬದುಕಿರುವಂತೆ ವರ್ತಿಸಿದರು. ಇದಕ್ಕೆ ಏನು ಕಾರಣ ವಿರಬಹುದು ಎಂದು ಆಲೋಚಿಸಿದೆ. ಅಂಬೇಡ್ಕರ್ ಅವರನ್ನು ಒತ್ತಿಕೊಂಡು ಹೋದರೆ ಇದು ಸಾಧ್ಯ ಎಂದೆನಿಸಿತು. ನಮಗೆ ತಿಳಿಯದಂತೆಯೇ ಪುಷ್ಕಲವಾದ ಆಹಾರವು ನಮ್ಮ ಮುಂದೆ ಬಂದಿದಿತು. ನಾವು ತುಂಬಾ ಹಸಿದಿದ್ದೆವು. ಅನ್ನವನ್ನು ತಿನ್ನುವಾಗ ಕಂದಗಾಲ ಶ್ರೀನಿವಾಸ್ ರವರಿಗೆ ಹೇಳಿದೆ. ಅಂಬೇಡ್ಕರ್ ಅವರ ಹೆಸರು ಹೇಳಿದರೆ ಎಂತಹ ಬಡತನದ ಮನೆಯಲ್ಲಿ ಅನ್ನ ಸಿಕ್ಕೇಸಿಕ್ಕುತ್ತದೆ ನೋಡಿ, ಎಂದು. ಅವರು ಗಂಭೀರವಾಗಿನ ನಕ್ಕು ಅವರ ಹೆಸರನ್ನು ಪ್ರಾಮಾಣಿಕವಾಗಿ ಹೇಳಬೇಕೆಂದರು. ಅವರಿಗೆ ಅಭಿನಂದನೆ ಸಲ್ಲಿಸಿ ಸನ್ನತಿಯ ಕಡೆ ಪ್ರಯಾಣ ಹೊರಟೆವು.

ವರದಿ : ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!