ಸಿರುಗುಪ್ಪ : –ಸರ್ಕಾರದಿಂದ ಇಡಿಗಂಟು ಜಾರಿಯಾಗಿರುವ ಆದೇಶವನ್ನು ತಾಲೂಕು ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ವತಿಯಿಂದ ನಗರದ ಮಹಾತ್ಮಗಾಂಧೀಜಿ ವೃತ್ತದಲ್ಲಿನ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ತಾಲೂಕು ಅಧ್ಯಕ್ಷೆ ದುರುಗಮ್ಮ ಮಾತನಾಡಿ 2022 ರ ಸಾಲಿನಲ್ಲಿ ಅಕ್ಷರ ದಾಸೋಹದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಿಸಿಯೂಟ ನೌಕರರಿಗೆ ಇಡಿಗಂಟು ನೀಡಬೇಕೆಂದು ನಮ್ಮ ಸಂಘಟನೆ ನಿರಂತರ ಹೋರಾಟ ಮಾಡುತ್ತಲೇ ಬಂದಿತ್ತು.ಒಂದು ಲಕ್ಷ ರೂಪಾಯಿಗಳ ಇಡಿಗಂಟು ನೀಡಬೇಕೆಂದು ಸರ್ಕಾರಕ್ಕೆ ಮತ್ತು ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡು ಹಲವಾರು ಬಾರಿ ಹೋರಾಟ ನಡೆಸಿದಾಗ ನಮ್ಮ ಬಗ್ಗೆ ಮುತುವರ್ಜಿ ವಹಿಸಿರಲಿಲ್ಲ.
ಆದ್ದರಿಂದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಇಂಡಿಗಂಟು ಜಾರಿ, ವೇತನ ಹೆಚ್ಚಳ, ಸಾದಿಲ್ವಾರು ಜಂಟಿಖಾತೆ ಬದಲಾವಣೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ಜುಲೈ 15, 2024 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ಧಿಷ್ಟವಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು.
ನಮ್ಮ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಸಂಘಟನೆಯ ಮುಖಂಡರೊಂದಿಗೆ ಮಾತನಾಡಿ 15 ವರ್ಷಕ್ಕಿಂತಲೂ ಅಧಿಕ ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡ ಅಡುಗೆ ಸಿಬ್ಬಂದಿಯವರಿಗೆ 40 ಸಾವಿರ. 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಂಡು ಕರ್ತವ್ಯದಿಂದ ಬಿಡುಗಡೆಗೊಂಡ ಸಿಬ್ಬಂದಿಗಳಿಗೆ 30 ಸಾವಿರ ಇಡಿಗಂಟು ನೀಡಲು ಒಪ್ಪಿಗೆ ನೀಡಿ ಅದಿಸೂಚನೆ ಹೊರಡಿಸಿದೆ.
ಇಡಿಗಂಟು ನೀಡಲು ಮುಂದಾದ ಸರ್ಕಾರದ ನಡೆಯು ನಮ್ಮ ಸಂಘಟನೆಗೆ ಸಿಕ್ಕ ಜಯವಾಗಿದ್ದು, ನಮ್ಮ ಇನ್ನಿತರ ಬೇಡಿಕೆಗಳನ್ನು ಮುಂದಿನ ದಿನಗಳಲ್ಲಿ ಸರ್ಕಾರ ಈಡೇರಿಸಬೇಕೆಂದು ತಿಳಿಸಿದರು.ಇದೇ ವೇಳೆ ಉಪಾಧ್ಯಕ್ಷೆ ನಾಗಲಕ್ಷ್ಮಿ, ಸದಸ್ಯರಾದ ಹುಲಿಗೆಮ್ಮ, ಭಾರತಿ, ಗಂಗಮ್ಮ, ಗೀತಾ, ಪುಷ್ಪಲತಾ, ಯಲ್ಲಮ್ಮ, ಲತೀಪ್‌ಖಾಜಾ ಇನ್ನಿತರ ಮುಖಂಡರಿದ್ದರು.
ವರದಿ:-ಶ್ರೀನಿವಾಸ ನಾಯ್ಕ