ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರವಾಗಿ, ಸಾಹಿತಿಗಳಾದ ಎಸ್ ಎಲ್ ಭೈರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು ಅವರು ಪ್ರಾಮಾಣಿಕರಾಗಿದ್ದರೆ ತನಿಖೆಯನ್ನು ಎದುರಿಸಲಿ ಆದರೆ ರಾಜ್ಯಪಾಲರಿಗೆ ಅಗೌರವ ತೋರಬಾರದು ಎಂದು ತಿಳಿಸಿದರು.
ಮೈಸೂರು ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶನಿವಾರ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗ ಅದನ್ನು ರಾಜ್ಯ ಸರ್ಕಾರ ಸಮರ್ಥವಾಗಿ ಎದುರಿಸುವ ಬದಲು ಅವರಿಗೆ ಅಗೌರವ ತರುವಂತೆ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ಇಂಥ ದೂರುಗಳು ಬಂದಾಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಆದೇಶ ನೀಡಬಹುದು. ಆರೋಪ ಹೊತ್ತವರು ಪ್ರಾಮಾಣಿಕರಿದ್ದರೆ ಎದುರಿಸಬೇಕಷ್ಟೆ ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದರು.ರಾಜ್ಯಪಾಲರ ಹುದ್ದೆ ಪರಮೋಚ್ಚ ಸಾಂವಿಧಾನಿಕ ಹುದ್ದೆ. ಕಾಲಾನಂತರ ಅದು ಗಂಡಾಂತರಕಾರಿ ಸ್ಥಾನ ಎಂದರು.