ಲಕ್ನೋ: ಪೋಷಕರ ಇಚ್ಛೆಗೆ ವಿರುದ್ಧವಾಗಿ ಪ್ರೇಮಿಗಳು ಮದುವೆಯಾದರೆ ಅವರಿಗೆ ಪೊಲೀಸ್ ರಕ್ಷಣೆ ಕೊಡಲಾಗುವುದಿಲ್ಲ ಎಂದು ಅಹಲಬಾದ್ ಹೈಕೋರ್ಟ್ ತಿಳಿಸಿದೆ.
ತಮ್ಮ ತಂದೆ ತಾಯಿಯ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಪ್ರೇಮಿಗಳು ಅವರ ಜೀವ ಮತ್ತು ಸ್ವಾತಂತ್ರ್ಯಕ್ಕೆ ನಿಜವಾದ ಬೆದರಿಕೆ ಇಲ್ಲದಿದ್ದರೆ ಅಂತಹ ಜನರು ಪೊಲೀಸ್ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರೀತಿಸಿ ಮದುವೆಯಾದ ದಂಪತಿಗೆ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೌರಭ್ ಶ್ರೀವಾಸ್ತವ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಸ್ವಂತ ಇಚ್ಛೆಯಿಂದ ಮದುವೆಯಾಗುವವರಿಗೆ ಪೊಲೀಸ್ ರಕ್ಷಣೆಯ ಹಕ್ಕಿಲ್ಲ. ಅವರ ಜೀವ ಅಥವಾ ಸ್ವಾತಂತ್ರ್ಯಕ್ಕೆ ಏನಾದರೂ ಬೆದರಿಕೆ ಇದ್ದಾಗ ಮಾತ್ರವೇ ಭದ್ರತೆ ಒದಗಿಸಬಹುದು ಎಂದು ಪೀಠ ಹೇಳಿದೆ.
ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗುವ ದಂಪತಿ ತಮ್ಮ ಕುಟುಂಬ ಸದಸ್ಯರು ತಮ್ಮ ಶಾಂತಿಯುತ ದಾಂಪತ್ಯ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ದಂಪತಿಗಳಿಗೆ ನ್ಯಾಯಾಲಯ ಭದ್ರತೆ ಒದಗಿಸಬಹುದು, ಆದರೆ ಅವರಿಗೆ ಯಾವುದೇ ಬೆದರಿಕೆ ಇಲ್ಲದಿದ್ದರೆ ಅವರು ಪರಸ್ಪರ ಬೆಂಬಲಿಸಲು ಮತ್ತು ಸಮಾಜವನ್ನು ಎದುರಿಸಲು ಕಲಿಯಬೇಕು ಎಂದು ಹೇಳಿದೆ.