ಬೆಳಗಾವಿ : ಬಿಜೆಪಿಯಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನಡುವಿನ ಭಿನ್ನಾಭಿಪ್ರಾಯ ಸ್ಫೋಟ ಹಿನ್ನೆಲೆಯಲ್ಲಿ, ರಾಮುಲು ಅವರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎಂಬ ಆರೋಪಗಳನ್ನು ರೆಡ್ಡಿ ಮಾಡಿದ್ದರು.
ಈ ಕುರಿತು ಚಿಕ್ಕೋಡಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು, ರಾಮುಲು ಅವರು ಕಾಂಗ್ರೆಸ್ಗೆ ಬಂದರೆ ನಾನು ಸ್ವಾಗತಿಸುವೆ ಎಂದರು.
ಅವರು ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಂಡು ಬರುವುದಾದರೆ ಬರಲಿ ನನ್ನ ಅಭ್ಯಂತರವಿಲ್ಲ. ಇನ್ನು ಡಿಸಿಎಂ ಡಿಕೆಶಿ ಅವರು ಸತೀಶ್ ಜಾರಕಿಹೊಳಿ ಅವರನ್ನು ಬಗ್ಗು ಬಡಿಯಲು ಕಾಂಗ್ರೆಸ್ಗೆ ರಾಮುಲು ಅವರನ್ನು ಕರೆತರುವ ಯೋಜನೆಯಲ್ಲಿದ್ದಾರೆ ಎಂದಿದ್ದರು.
ನನ್ನ ಹಾಗೂ ಡಿಕೆಶಿ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ. ಎಲ್ಲರೂ ಸೇರಿ ಗಾಂಧಿ ಭಾರತ್ ಸಮಾವೇಶ ಮಾಡಿದ್ದೀವಲ್ಲ ಎಂದು ಸತೀಶ್ ತಿರುಗೇಟು ನೀಡಿದರು.
ರಾಮುಲು ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರು, ರಾಮುಲು ನನಗೆ ವೈಯಕ್ತಿವಾಗಿ ತುಂಬಾ ಹತ್ತಿರದವರು. ನಾನು ಅವರು ಒಳ್ಳೆಯ ಸ್ನೇಹಿತರು ಕೂಡ ಆಗಿದ್ದೇವೆ.
ಅವರನ್ನು ಕಾಂಗ್ರೆಸ್ಗೆ ಕರೆತರುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿದೆಯೋ, ಇಲ್ಲವೋ ಎಂಬುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ರಾಮುಲು ಅವರು ಕಾಂಗ್ರೆಸ್ಗೆ ಬಂದರೆ ನಾವು ವೆಲ್ಕಮ್ ಮಾಡುತ್ತೇವೆ ಎಂದು ಆಹ್ವಾನ ನೀಡಿದರು. ಸದ್ಯ ರಾಮುಲು ಅವರ ನಡೆ ಏನು ಎಂಬುವುದು ಜ.27 ನಂತರದಲ್ಲೇ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.