ತುರುವೇಕೆರೆ: ಪ್ರಸ್ತುತ ಸಮಾಜದಲ್ಲಿ ಸ್ವಾರ್ಥ, ದುರಾಸೆ ಹೆಚ್ಚಾಗಿ ಮನುಷ್ಯತ್ವ ಕಾಣೆಯಾಗುತ್ತಿದೆ. ಮಾನವರಲ್ಲಿ ಮೊದಲು ನಾನು ಎಂಬ ಅಹಂಕಾರ, ಸ್ವಾರ್ಥದ ಅಂಧಕಾರ ತೊಲಗಬೇಕಿದೆ. ಆಗ ಸಮಾಜದಲ್ಲಿ ಧಾರ್ಮಿಕ ಶ್ರದ್ಧೆ, ಮನುಷ್ಯತ್ವ, ಸೇವಾ ಮನೋಭಾವದ ದೀಪ ಪ್ರಜ್ವಲಿಸಲಿದೆ ಎಂದು ಕುಪ್ಪೂರು ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅತ್ತಿಕುಳ್ಳೆಪಾಳ್ಯ ಗ್ರಾಮದ ಶ್ರೀ ಶನೇಶ್ವರ ದೇವಾಲಯದಲ್ಲಿ 23 ನೇ ವರ್ಷದ ಕಾರ್ತೀಕ ದೀಪೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದ ಅವರು, ಕುಗ್ರಾಮ ಅತ್ತಿಕುಳ್ಳೆಪಾಳ್ಯ ಇಂದು ಸುಗ್ರಾಮವಾಗಿರುವುದು ಶ್ರೀ ಶನೇಶ್ವರ ಧಾರ್ಮಿಕ ಕ್ಷೇತ್ರವಾಗಿ ಪ್ರಜ್ವಲಿಸಲು ಶನೇಶ್ವರ ಸ್ವಾಮಿಯ ದಿವ್ಯ ಆರ್ಶೀವಾದ ಹಾಗೂ ಈ ಗ್ರಾಮದ ಜನರ ಸಜ್ಜನಿಕೆ, ಧಾರ್ಮಿಕ ಶ್ರದ್ಧೆ ಕಾರಣವಾಗಿದೆ. ಕಳೆದ ಎರಡು ದಶಕದ ಹಿಂದೆ ಗ್ರಾಮಕ್ಕೆ ಬಂದ ಅಮಾನಿಕೆರೆ ಮಂಜಣ್ಣ, ಎನ್.ಆರ್. ಜಯರಾಮ್ ಜೋಡಿ ಗ್ರಾಮದ ಜನರಲ್ಲಿದ್ದ ಅಂಧಕಾರದ ಕೊಳೆಯನ್ನು ತೆಗೆದುಹಾಕಿ ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ನಿರ್ಮಾಣ ಮಾಡಿ ಜನರಲ್ಲಿ ಧರ್ಮದ ದೀಪವನ್ನು ಪ್ರತಿ ವರ್ಷ ಹಚ್ಚುವಂತೆ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿಯವರು ಮಾತನಾಡಿ, ಸಂಸ್ಕಾರವಿಲ್ಲದಿದ್ದರೆ ಸಮಾಜ ನಮ್ಮನ್ನು ಕೀಳಾಗಿ ಕಾಣುತ್ತದೆ, ಬದುಕು ವ್ಯರ್ಥವಾಗುತ್ತದೆ. ಪ್ರತಿಯೊಬ್ಬರೂ ಸಂಸ್ಕಾರದಿಂದ ನಡೆಯುವುದರ ಜೊತೆಗೆ ಮುಂದಿನ ಪೀಳಿಗೆಗೂ ಸಂಸ್ಕಾರವನ್ನು ಕಲಿಸಬೇಕಿದೆ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ್ ಉದ್ಘಾಟಿಸಿದರು. ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ವಿದ್ಯಾರ್ಥಿನಿ ಸಭ್ಯರಾಜಕುಮಾರಿ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಅತ್ತಿಕುಳ್ಳೆಪಾಳ್ಯದ ಊರುಬಾಗಿಲಿನಿಂದ ಧಾರ್ಮಿಕ ನಾಯಕರು, ಸ್ವಾಮೀಜಿಗಳವರನ್ನು ಶ್ರೀ ಶನಿದೇವರ ಬಸವ ಹಾಗೂ ನಗಾರಿ ವಾದ್ಯ, ಮಂಗಳವಾದ್ಯ, ಜಾನಪದ ಕಲಾತಂಡಗಳೊಂದಿಗೆ, ಕಳಶ ಹೊತ್ತ ಹೆಣ್ಣುಮಕ್ಕಳ ಪೂರ್ಣಕುಂಭ ಸ್ವಾಗತದೊಂದಿಗೆ ಪಾದಯಾತ್ರೆ ಮೂಲಕ ಧಾರ್ಮಿಕ ಸಭೆಯ ವೇದಿಕೆಗೆ ಕರೆತರಲಾಯಿತು.
ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಉದ್ಯಮಿ ಎಂ.ಡಿ.ಮೂರ್ತಿ, ಜಿಪಂ ಮಾಜಿ ಸದಸ್ಯೆ ರೇಣುಕಾಕೃಷ್ಣಮೂರ್ತಿ, ಪಪಂ ಸದಸ್ಯ ಚಿದಾನಂದ್, ಟ್ರಸ್ಟ್ ನ ಗೌರವಾಧ್ಯಕ್ಷ ಎನ್.ಆರ್. ಜಯರಾಮ್, ಅಧ್ಯಕ್ಷ ಟಿ.ಎನ್.ಮಂಜುನಾಥ್ (ಅಮಾನಿಕೆರೆ), ಉಪಾಧ್ಯಕ್ಷ ಮೂಡಲಗಿರಯ್ಯ, ಕಾರ್ಯದರ್ಶಿ ಕುಮಾರ್ ಸೇರಿದಂತೆ ಟ್ರಸ್ಟ್ ನ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್