ನವದೆಹಲಿ : ಅಕ್ರಮ ಗಣಿಗಾರಿಕೆ ಕೇಸ್‌ಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅಪರಾಧಿ ಎಂದು ಇಂದು ದೆಹಲಿಯ ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟ ಮಾಡಿದೆ. 7 ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿದೆ. ಈ ಮೂಲಕ ಜಾಮೀನಿನ ಮೇಲೆ ಹೊರಗಿದ್ದ ಶಾಸಕರಿಗೆ ಸಂಕಷ್ಟ ಎದುರಾಗಿದೆ.
ಆದರೂ ಜನಾರ್ದನ ರೆಡ್ಡಿ ಹೆಚ್ಚು ದಿನ ಜೈಲಿನಲ್ಲಿ ಇರುವುದೇ ಅನುಮಾನ.
2024ರ ನವೆಂಬರ್ನಲ್ಲಿ ಬೇಲೆಕೇರಿ ಬಂದರು ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೂ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಸತೀಶ್ ಸೈಲ್ ಹಾಗೂ ಇತರ ಆರೋಪಿಗಳು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ, ಹೈಕೋರ್ಟ್ ಮೊರೆ ಹೋಗಿದ್ದರು. ಉಚ್ಛ ನ್ಯಾಯಾಲಯ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಸೂಚಿಸಿತ್ತು.
ಜನಾರ್ದನ ರೆಡ್ಡಿ ಕೂಡಾ ಸತೀಶ್ ಸೈಲ್ ರೀತಿ ಹೈಕೋರ್ಟ್ಗೆ ಮೊರೆ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಹೈದರಾಬಾದ್ ಹೈಕೋರ್ಟ್ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ಅಮಾನತಿನಲ್ಲಿಟ್ಟರೆ, ಜನಾರ್ದನ ರೆಡ್ಡಿ ಜೈಲಿಗೆ ಹೋಗುವುದಿಲ್ಲ. ಜೊತೆಗೆ ಜನಾರ್ದನ ರೆಡ್ಡಿಯವರ ಶಾಸಕ ಸ್ಥಾನಕ್ಕೂ ತೊಂದರೆ ಆಗುವುದಿಲ್ಲ.