ಬೆಳಗಾವಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಭಡ್ತಿ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರಕಾರ ರದ್ದುಗೊಳಿಸಬೇಕು. ಅಲ್ಲದೇ ಬಹು ವರ್ಷಗಳ ಬೇಡಿಕೆಯಾಗಿರುವ ಒಳ ಮೀಸಲಾತಿ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಮಾದಿಗ ಒಳ ಮೀಸಲಾತಿಗಾಗಿ ಚಾಮರಾಜ ನಗರದಿಂದ ರಥಯಾತ್ರೆ ಹೋರಾಟ ಆರಂಭಿಸಿರುವ ರಥಯಾತ್ರೆ ಮುಖಂಡರಾದ ಬಾಸ್ಕರ ಪ್ರಸಾದ ಇಂದಿಲ್ಲಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಮ ಕೋರ್ಟ್ ಆದೇಶವೊಂದನ್ನು ಬಿಡುಗಡೆ ಮಾಡಿ ಸೂಕ್ತ ದತ್ತಾಂಶ ಇಟ್ಟುಕೊಂಡು ಒಳ ಮೀಸಲಾತಿ ಮಾಡಿ ಎಂದು ಆದೇಶಿಸಿದ್ದನ್ನು ರಾಜ್ಯ ಸರಕಾರ ದುರುಪಯೋಗ ಪಡಿಸಿಕೊಂಡು ಒಳ ಮೀಸಲಾತಿಯನ್ನು ನಿರಂತರವಾಗಿ ಮುಂದುಡೂತ್ತಲೇ ಬಂದಿದೆ ಎಂದು ಬಾಸ್ಕರ ಪ್ರಸಾದ ಆರೋಪಿಸಿದರು.
ಚಾಮರಾಜ ನಗರದ ಬಿ. ಕೃಷ್ಣಪ್ಪ ಸಮಾಧಿ ಸ್ಥಳದಿಂದ ಆರಂಭವಾದ ಮಾದಿಗ ಒಳ ಮೀಸಲಾತಿ ಹೋರಾಟದ ರಥ ಯಾತ್ರೆ ಇಂದು ಬೆಳಗಾವಿಗೆ ತಲುಪಿದ ಹಿನ್ನೆಲೆಯಲ್ಲಿ ಸಂಘಟನೆಯ ಮುಖಂಡರಾದ ಬಾಸ್ಕರ ಪ್ರಸಾದ ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಭಡ್ತಿ ನೇಮಕಾತಿ ರದ್ದುಗೊಳಿಸಿ: ಒಳ ಮೀಸಲಾತಿ ಸಂಬಂಧವಾಗಿ ಹೊಸ ನೇಮಕಾತಿಗಳನ್ನು ರಾಜ್ಯ ಸರಕಾರ ಸ್ಥಗಿತಗೊಳಿಸಿದೆಯಾದರೂ ಅಂದಿನಿಂದ ಇಂದಿನಿವರೆಗೆ ಭಡ್ತಿ ಮೂಲಕ ಹುದ್ದೆಗಳ ನೇಮಕಾತಿಯನ್ನು ನಡೆಸುತ್ತಲೇ ಬಂದಿದೆ. ಒಂದೆಡೆ ಒಳ ಮೀಸಲಾತಿ ಸಂಬಂಧವಾಗಿ ಹೊಸ ನೇಮಕಾತಿಗಳನ್ನು ರದ್ದುಗೊಳಿಸಿದೆಯಾದರೂ ಭಡ್ತಿ ಮೂಲಕ ಹುದ್ದೆಗಳ ನೇಮಕಾತಿ ನಡೆದಿದ್ದು ಮಾದಿಗ ಸಮಾಜಕ್ಕೆ ತೀವ್ರ ನೋವು ಉಂಟು ಮಾಡಿದೆ ಎಂದು ಅವರು ಆರೋಪಿಸಿದರು.
ತಕ್ಷಣದಿಂದಲೇ ಜಾರಿಗೆ ಬರುವಂತೆ 2024 ರಿಂದ ಈಚೆಗೆ ಭಡ್ತಿ ಮೂಲಕ ನಡೆದಿರುವ ಎಲ್ಲ ನೇಮಕಾತಿಗಳನ್ನು ರದ್ದುಗೊಳಿಸಬೇಕು. ಇದರ ಜೊತೆಗೆ ಸುಪ್ರಿಂ ಆದೇಶದಂತೆ ಒಳ ಮೀಸಲಾತಿ ಜಾರಿಗೆ ತಂದು ಎಲ್ಲ ಖಾಲಿ ಹುದ್ದೆಗಳ ನೇಮಕಾತಿ ನಡೆಸಬೇಕು. ಈ ಮೂಲಕ ನಮ್ಮ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಕಡ್ಡಾಯವಾಗಿ ಒಳ ಮೀಸಲಾತಿ ಜಾರಿಗೆ ತರಬೇಕು ಇಲ್ಲದಿದ್ದರೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಬೆಳಗಾವಿ ಜಿಲ್ಲಾ ಮಾದಿಗ ಸಮುದಾಯದ ಬೆಂಬಲ: ಮಾದಿಗ ಸಮುದಾಯದ ಮುಖಂಡರಾದ ಎನ್. ಪ್ರಶಾಂತರಾವ್ ಅವರು ಮಾತನಾಡಿ ಬಾಸ್ಕರ ಪ್ರಸಾದ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಜಿಲ್ಲಾ ಮಾದಿಗ ಘಟಕದಿಂದ ಸಂಪೂರ್ಣ ಬೆಂಬಲ ಇದೆ ಎಂದು ಪ್ರಕಟಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಥಯಾತ್ರೆ ಹೋರಾಟ ಸಮಿತಿಯ ಮುಖಂಡರು ಬೆಳಗಾವಿ ಜಿಲ್ಲಾ ಮಾದಿಗ ಸಮುದಾಯದ ಮುಖಂಡರು ಇದ್ದರು.