ಚೆನ್ನೈ (ತಮಿಳುನಾಡು): ಇಂದಿನ ಆಧುನಿಕ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಮಾನತೆಯ ಕುರಿತು ನಾವು ಹೆಮ್ಮೆಯಿಂದ ಮಾತನಾಡುತ್ತಿದ್ದೇವೆ. ಆದರೆ, ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳವನ್ನು ಗಂಡು ಮಕ್ಕಳಿಗಿಂತಲೂ ತುಂಬಾ ಕೀಳಾಗಿ ನೋಡುವ ಮನಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಹೆಣ್ಣುಮಕ್ಕಳನ್ನು ಸಾಪೇಕ್ಷವಾಗಿ ಬೆಳೆಸುವ ಹಾಗೂ ಶಿಕ್ಷಣ ನೀಡುವ ಸವಾಲುಗಳು ಹಾಗೂ ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಮೇಲಿನ ಸಾಮಾಜಿಕ ಒತ್ತಡವು ಪೋಷಕರ ಈ ಮನೋಭಾವಕ್ಕೆ ಕಾರಣವಾಗಿರಬಹುದು.
2011ರ ಜನಗಣತಿಯ ಪ್ರಕಾರ, ತಮಿಳುನಾಡು ರಾಜ್ಯವು ದೇಶದ ಸರಾಸರಿಗಿಂತ (1000 ಪುರುಷರು: 940 ಮಹಿಳೆಯರು) ಹೆಚ್ಚಿನ ಮಹಿಳಾ ಲಿಂಗ ಅನುಪಾತವನ್ನು (1000 ಪುರುಷರು: 995 ಮಹಿಳೆಯರು) ಹೊಂದಿದೆ ಎಂದು ಹೆಮ್ಮೆಪಡುತ್ತದೆ. ಆದರೆ, ಮುಂದಿನ ದಶಕದಲ್ಲಿ ಈ ಅಂಕಿ ಅಂಶವು ಕ್ರಮೇಣ ಕುಸಿಯಲು ಪ್ರಾರಂಭಿಸಿತು. ಇದನ್ನು ಮಹತ್ವದ ಸಾಮಾಜಿಕ ಸಮಸ್ಯೆ ಎಂದು ಗುರುತಿಸಿದ ತಮಿಳುನಾಡು ಸರ್ಕಾರವು ಈ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಲು ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತಂದಿತು.