ಬೆಂಗಳೂರು: ಈ ವರ್ಷದ ಆರಂಭದಿಂದಲೂ ದೇಶಾದ್ಯಂತ ಹತ್ತು ಹಲವಾರು ಸೈಕೋ ಕಿಲ್ಲರ್ಗಳ ಅನೇಕ ಪ್ರಕರಣಗಳು ವರದಿಯಾಗಿವೆ. ಈ ಕತೆಗಳು ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ವರ್ಷದ ಆರಂಭದಲ್ಲಿ ಕ್ರೂರ ತಾಯಿ ತನ್ನ ಮಗುವನ್ನೇ ಕೊಂದು ಸೂಟ್ಕೇಸ್ನಲ್ಲಿ ಸಾಗಿಸಿದ ಪ್ರಕರಣದಿಂದ ಹಿಡಿದು ಇತ್ತೀಚೆಗೆ ರೈಲಿನಲ್ಲಿ ವಿವಿಧ ರಾಜ್ಯಗಳಿಗೆ ಸಂಚರಿಸುತ್ತಲೇ 11 ದಿನಗಳ ಅಂತರದಲ್ಲಿ 5 ಮಹಿಳೆಯರ ಸರಣಿ ಹತ್ಯೆಗಳನ್ನು ಮಾಡಿದ ಹಂತಕನ ಕಥೆಗಳ ವರೆಗೆ ಈ ಪ್ರಕರಣಗಳು ಜನತೆಯನ್ನು ನಡುಗಿಸಿದೆ.
2024ರಲ್ಲಿ ಅನೇಕ ಸೈಕೋ ಕಿಲ್ಲರ್ ಪ್ರಕರಣಗಳು ನಡೆದಿದ್ದು, ಅವುಗಳ ಪೈಕಿ ಸಾಕಷ್ಟು ಸದ್ದು ಮಾಡಿದ ಕೆಲವು ಕೇಸ್ಗಳ ಬಗ್ಗೆ ನಾವಿಂದು ಮಾಹಿತಿ ನೀಡುತ್ತೇವೆ.
ಗೋವಾ ಪ್ರಕರಣ:
ಈ ವರ್ಷದ ಆರಂಭದಲ್ಲೇ ಭಾರೀ ಸದ್ದು ಮಾಡಿದ ಭಯಾನಕ ಪ್ರಕರಣ ಇದಾಗಿದೆ. ಮೈಂಡ್ಫುಲ್ ಎಐ ಲ್ಯಾಬ್ನ ಸಂಸ್ಥಾಪಕಿ ಹಾಗೂ ಸಿಇಒ 39 ವರ್ಷದ ಸುಚನಾ ಸೇಠ್ ತನ್ನ ಮಗುವನ್ನು ಬೆಂಗಳೂರಿನಿಂದ ಗೋವಾಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಹೋಟೆಲ್ ಕೊಠಡಿಯಲ್ಲಿ ಮಗುವನ್ನು ದಿಂಬಿನಿಂದ ಉಸಿರು ಬಿಗಿದು ಹತ್ಯೆ ಮಾಡಿದ್ದಳು.
ಬಳಿಕ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ, ಬೆಂಗಳೂರಿಗೆ ವಾಪಸ್ ಹೋಗಲು ಕ್ಯಾಬ್ ಬುಕ್ ಮಾಡಿದ್ದಳು. ಆದರೆ ನಡು ರಸ್ತೆಯಲ್ಲಿಯೇ ಹಂತಕಿ ಸಿಕ್ಕಿ ಬಿದ್ದಿದ್ದಳು.
ತನ್ನ ವಿಚ್ಛೇದಿತ ಪತಿಗೆ ಮಗುವನ್ನು ವಾರಕ್ಕೊಮ್ಮೆ ಭೇಟಿಯಾಗಬಹುದು ಎಂದು ನ್ಯಾಯಾಲಯ ಆದೇಶಿಸಿತ್ತು. ಆದರೆ ಸುಚನಾಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ಆಕೆ ಮಗುವನ್ನು ಕೊಂದಿದ್ದಾಳೆ. ಸದ್ಯ ಸೂಚನಾ ಸೇಠ್ ಜೈಲಿನಲ್ಲಿದ್ದು, ಆಕೆಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.
ಬುಲಂದ್ಶಹರ್ ಪ್ರಕರಣ:
ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಜೂನ್ ತಿಂಗಳಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನೇ ಹತ್ಯೆಗೈದು, ತಾನು ಸಂಜಯ್ ದತ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದ. ಅದ್ನಾನ್ ಅಲಿಯಾಸ್ ಬಲ್ಲು ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯನ್ನು ಪ್ರೀತಿಸುತ್ತಿದ್ದ. ಆ ಮಹಿಳೆಗೂ ವಿವಾಹವಾಗಿದ್ದು, ಇಬ್ಬರೂ ಅನೈತಿಕ ಸಂಬಂಧದಲ್ಲಿದ್ದರು.
ಅಷ್ಟರಲ್ಲಿ ಆತನಿಗೆ ತನ್ನ ಪ್ರೇಯಸಿ ಇನ್ನೂ ಬೇರೆ ಗಂಡಸರ ಜೊತೆ ಮಾತನಾಡುತ್ತಾಳೆ ಎಂಬುದು ತಿಳಿದು ಬಂದಿತ್ತು. ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಭಾವಿಸಿ, ಆಕೆಯ ಹತ್ಯೆಗೆ ಸಂಚು ರೂಪಿಸಿ ಸ್ಮಶಾನದಲ್ಲಿ ಭೇಟಿಯಾಗುವಂತೆ ಕರೆದಿದ್ದ. ನಂತರ ಆಕೆಯನ್ನು ಅಲ್ಲಿಯೇ ಕೊಲೆ ಮಾಡಿದ್ದ.
ನಂತರ ಪೊಲೀಸರು ಸೈಕೋ ಕಿಲ್ಲರ್ ಅನ್ನು ಬಂಧಿಸಿದ್ದು, ಈ ವೇಳೆ ಆತ ವಿಚಿತ್ರವಾಗಿ ಮಾತನಾಡಿದ್ದ. ನಾನು ಸಂಜಯ್ ದತ್ ಅಭಿಮಾನಿ, ನನಗೆ ಮೋಸ ಎಂದರೆ ಇಷ್ಟ ಇಲ್ಲ ಎಂದಿದ್ದ. ಸದ್ಯ ಬಲ್ಲು ಜೈಲಿನಲ್ಲಿದ್ದಾನೆ.
ಬರೇಲಿ ಪ್ರಕರಣ:
ಉತ್ತರ ಪ್ರದೇಶದ ಬರೇಲಿಯಲ್ಲಿ 11 ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ, ನಂತರ ಕತ್ತು ಹಿಸುಕಿ ಕೊಲ್ಲಲುತ್ತಿದ್ದ. ಪ್ರತಿ ಕೃತ್ಯದ ಬಳಿಕ ಆತ ಬಲಿಪಶುವಿನ ಬಳಿಯಿದ್ದ ಯಾವುದಾದರೂ ಒಂದು ಆಭರಣ ಇಲ್ಲವೇ ವಸ್ತುವನ್ನು ನೆನಪಿಗಾಗಿ ತೆಗೆದುಕೊಂಡು ಹೋಗುತ್ತಿದ್ದ. ಬರೇಲಿ ಪೊಲೀಸರ ಪ್ರಕಾರ ಆರೋಪಿಯ ಹೆಸರು ಕುಲದೀಪ್ ಗಂಗ್ವಾರ್. ಆತ ಬರೇಲಿಯ ನವಾಬ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಕರ್ಗಂಜ್ ಸಮುವಾ ಗ್ರಾಮದ ನಿವಾಸಿ. ಆತನ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತಾ ಪ್ರಕರಣ:
ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಈ ಘಟನೆ ದೇಶಾದ್ಯಂತ ವೈದ್ಯರ ಪ್ರತಿಭಟನೆಗೆ ಕಾರಣವಾಗಿತ್ತು. ಕೋಲ್ಕತ್ತಾದ ಆರ್ಜಿಕರ್ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಸಂಜಯ್ ರಾಯ್ ಎಂಬ ವ್ಯಕ್ತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ನಂತರ ಬರ್ಬರವಾಗಿ ಕೊಂದಿದ್ದ. ಪೊಲೀಸರ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದ ಸಂಜಯ್ ರಾಯ್ನನ್ನು ಕೋಲ್ಕತ್ತಾ ಪೊಲೀಸರು ಘಟನೆ ನಡೆದ ಒಂದು ದಿನದ ಬಳಿಕ ಆಗಸ್ಟ್ 10 ರಂದು ಬಂಧಿಸಿದ್ದರು.
ವರದಿಗಳ ಪ್ರಕಾರ ಸಂಜಯ್ ರಾಜ್ ಐದು ಬಾರಿ ಮದುವೆಯಾದರೂ ಯಾವ ಸಂಬಂಧವೂ ಹೆಚ್ಚು ದಿನ ಉಳಿದಿರಲ್ಲ ಎನ್ನಲಾಗಿದೆ. ಆತ ತನ್ನ ಎಲ್ಲಾ ಪತ್ನಿಯರಿಗೂ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆದ್ದರಿಂದ ಯಾವ ಪತ್ನಿಯೂ ಆತನೊಂದಿಗೆ ಬಾಳಲು ಬಯಸಲಿಲ್ಲ. ಮೊದಲೇ ಅಪರಾಧ ಪ್ರವೃತ್ತಿ ಹೊಂದಿದ್ದ ವ್ಯಕ್ತಿ ವೈದ್ಯೆಯ ಮೇಲೆ ಅತ್ಯಾಚಾರ, ಕೊಲೆ ನಡೆಸಿದ ಬಳಿಕವೂ ಯಾವುದೇ ಪಶ್ಚಾತಾಪವಿಲ್ಲದಂತೆ ವರ್ತಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಪ್ರಸ್ತುತ ಜೈಲಿನಲ್ಲಿದ್ದು, ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಕರ್ನಾಟಕ ಪ್ರಕರಣ:
ಸೆಪ್ಟೆಂಬರ್ 2 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ವಿವಾಹಿತೆ ಮಹಾಲಕ್ಷ್ಮಿಗೆ ಒಬ್ಬಳು ಮಗಳೂ ಇದ್ದು, ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು.
ಆಕೆಗೆ ಒಡಿಶಾ ನಿವಾಸಿಯಾಗಿದ್ದ ರಂಜನ್ ರಾಯ್ ಹೆಸರಿನ ಗೆಳೆಯನಿದ್ದ. ಆತನೇ ಮಹಾಲಕ್ಷ್ಮಿಯನ್ನು ಕೊಲೆ ಮಾಡಿ, ಶವವನ್ನು 59 ತುಂಡು ಮಾಡಿ ಫ್ರಿಡ್ಜ್ ನಲ್ಲಿಟ್ಟು ಓಡಿ ಹೋಗಿದ್ದ. ಕೆಲ ದಿನಗಳ ಬಳಿಕ ಫ್ಲಾಟ್ನಿಂದ ದುರ್ವಾಸನೆ ಬರಲಾರಂಭಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.
ಆರೋಪಿ ರಂಜನ್ ರಾಯ್ನನ್ನು ಬಂಧಿಸಲು ಪೊಲೀಸರು ಒಡಿಶಾ ತಲುಪಿದಾಗ ಆತ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದ ಆತ ಅದರಲ್ಲಿ, ಮಹಾಲಕ್ಷ್ಮಿ ನನಗೆ ಚಿತ್ರಹಿಂಸೆ ನೀಡುತ್ತಿದ್ದಳು. ನನಗೆ ಅದನ್ನು ಸಹಿಸಿಕೊಂಡು ಇರಲು ಆಗುತ್ತಿರಲಿಲ್ಲ. ಹೀಗಾಗಿ ನಾನು ಆಕೆಯ ಹತ್ಯೆ ಮಾಡಿದ್ದಾಗಿ ಉಲ್ಲೇಖಿಸಿದ್ದ.
ಗುಜರಾತ್ ಪ್ರಕರಣ:
ಕ್ರೌರ್ಯದ ಎಲ್ಲಾ ಮಿತಿಗಳನ್ನು ಮೀರಿದ ಮೃಗೀಯ ವ್ಯಕ್ತಿತ್ವದ ಸೈಕೋ ಕಿಲ್ಲರ್ ಅನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಯಾರನ್ನೂ ಬಿಡದ ಈತ ಬಾಲಕಿಯೊಬ್ಬಳನ್ನು ಕೊಲೆ ಮಾಡಿ ನಂತರ ಆಕೆಯ ಶವದೊಂದಿಗೆ ಗಂಟೆಗಳ ಕಾಲ ಸಂಭೋಗ ನಡೆಸಿದ್ದ. ಗುಜರಾತ್ ಪೊಲೀಸರು ಈ ಹಂತಕನ ಕೃತ್ಯಗಳನ್ನು ಬಯಲಿಗೆಳೆದಾಗ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಆತ ಕೇವಲ ಒಂದು ಊರಿನಲ್ಲಿ ಅಪರಾಧಗಳನ್ನು ಮಾಡದೇ ನಿರಂತವಾಗಿ ರೈಲಿನಲ್ಲಿ ಪ್ರಯಾಣ ಮಾಡಿಕೊಂಡೇ ಐದು ರಾಜ್ಯಗಳಲ್ಲಿ ಕೃತ್ಯಗಳನ್ನು ನಡೆಸಿದ್ದ.
ಹರಿಯಾಣದ ರೋಹ್ಟಕ್ ನಿವಾಸಿ ರಾಹುಲ್ ಸಿಂಗ್ ಜಾಟ್ ಗುಜರಾತ್ನ ವಲ್ಸಾದ್ನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದ ಮೇಲೆ ಸಿಕ್ಕಿಬಿದ್ದಿದ್ದ. ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣದಲ್ಲಿ ರೈಲಿನಲ್ಲಿ ಸಂಚರಿಸುತ್ತಲೇ ಹಲವಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾಗಿ ಬಹಿರಂಗಪಡಿಸಿದ್ದಾನೆ.
ಆತನ ಬಂಧನಕ್ಕೂ ಕೇವಲ ಎರಡು ದಿನಗಳ ಮೊದಲು ತೆಲಂಗಾಣದಲ್ಲಿ ಮಹಿಳೆಯನ್ನು ಕೊಂದಿದ್ದ. 11 ದಿನಗಳ ಅಂತರದಲ್ಲಿ ಒಟ್ಟು 5 ಕೊಲೆಗಳನ್ನು ಮಾಡಿರುವುದು ತಿಳಿದು ಬಂದಿದೆ. ಸದ್ಯ ಆತ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.