ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದು, ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ತಬ್ಬಿಕೊಂಡು ಕಿರುಕುಳ ನೀಡಿದ್ದ ಕಾಮುಕ ಡೆಲಿವರಿ ಬಾಯ್ ನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.
ಮುನಿರುದ್ದೀನ್ ಖಾನ್ ಬಂಧಿತ ಆರೋಪಿ. ಮೂಲತಃ ಪಶ್ಚಿಮ ಬಂಗಾಳದವನಾದ ಮುನಿರುದ್ದೀನ್ ನಗರದ ಕೊತ್ತನೂರಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ.
ಯುವಕ ರಸ್ತೆಯಲ್ಲಿ ಬಟ್ಟೆಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ.ಬಳಿಕ ಯುವತಿಯನ್ನು ಹಿಂದಿನಿಂದ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಕೂಡಲೇ ಯುವತಿ ಯುವಕನ ಕೆನ್ನೆಗೆ ಹೊಡೆದು ಕಿರುಚಿಕೊಂಡಿದ್ದಾಳೆ.
ಘಟನೆ ಬಳಿಕ ಕೊತ್ತನೂರು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.




