Ad imageAd image

ಮೈಕ್ರೋ ಫೈನಾನ್ಸ್ ವಿರುದ್ದ ದೂರು ಬಂದಲ್ಲಿ ತಕ್ಷಣ ಕ್ರಮ ಜಿಲ್ಲಾಧಿಕಾರಿ ದಿವ್ಯ ಪ್ರಭು.

Bharath Vaibhav
ಮೈಕ್ರೋ ಫೈನಾನ್ಸ್ ವಿರುದ್ದ ದೂರು ಬಂದಲ್ಲಿ ತಕ್ಷಣ ಕ್ರಮ ಜಿಲ್ಲಾಧಿಕಾರಿ ದಿವ್ಯ ಪ್ರಭು.
WhatsApp Group Join Now
Telegram Group Join Now

ಧಾರವಾಡ: ಮೈಕ್ರೋ ಫೈನಾನ್ಸ್, ವಿವಿಧ ಹಣಕಾಸು ಸಂಸ್ಥೆ ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿಯಲ್ಲಿ ನಿಯಮ ಬಾಹೀರವಾಗಿ ನಡೆದುಕೊಂಡಲ್ಲಿ ತಕ್ಷಣ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ, ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿ ನೆಪದಲ್ಲಿ ಸಾಲಗಾರರಿಗೆ ಆಗುತ್ತಿರುವ ಕಿರಕುಳ ಹಿನ್ನಲೆಯಲ್ಲಿ ಮೈಕ್ರೊಫೈನಾನ್ಸ್, ಫೈನಾನ್ಸ್ ಕಾರ್ಪೋರೇಶನ್ ಲೇವಾದೇವಿಗಾರರು, ಗಿರವಿದಾರರು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಮೈಕ್ರೊಫೈನಾನ್ಸ್ಗಳು ಭಾರತೀಯ ರೀಜರ್ವ್ ಬ್ಯಾಂಕ್ ನಿಯಮದ ಪ್ರಕಾರ ವ್ಯವಹಾರ ನಡೆಸಬೇಕು. ಸಾಲದ ಕಾರಣಕ್ಕೆ ಜೀವ ಹಾನಿ ಆಗಬಾರದು. ನಿರ್ಧಿಷ್ಟ ಪಡಿಸಿರುವ ನಿಯಮಗಳ ಚೌಕಟ್ಟಿನಲ್ಲಿ ಸಾಲ ವಸೂಲಾತಿ ಆಗಬೇಕು ಹೊರತು, ಯಾವುದೇ ರೀತಿಯಲ್ಲಿ ಸಾಲಗಾರರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರು ಬಂದಲ್ಲಿ ಮೈಕ್ರೋಫೈನಾನ್ಸ್ ವಿರುದ್ದ ಕ್ರಮ ಜರುಗಿಸಲಾಗುತ್ತದೆ. ಸಾಮಥ್ರ್ಯಕ್ಕೆ ಅನುಗುಣವಾಗಿ ಸಾಲ ವಿತರಣೆ ಮಾಡಬೇಕು. ನಿಯಮ ಮೀರಿ ಸಾಲ ನೀಡಿ ಸಾಲಗಾರರ ಮೇಲೆ ದಬ್ಬಾಳಿಕೆ ನಡೆಸಿದಲ್ಲಿ ಅದಕ್ಕೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ಅವರು ತಿಳಿಸಿದರು.

ಸಾಲ ಪಡೆಯುವ ವ್ಯಕ್ತಿಗೆ ಸಾಲ ಎಷ್ಟು, ಬಡ್ಡಿದರ, ಕಂತುಗಳು, ವಸೂಲಿ ಸ್ಥಳ, ವಸೂಲುಗಾರ ಯಾರು, ಮುಂತಾದ ವಿವರ ಇರುವ ಕಾರ್ಡ್ ನೀಡಬೇಕು. ಮತ್ತು ತಮ್ಮ ಸಂಸ್ಥೆಯ ಕಚೇರಿಯಲ್ಲಿ ಅಥವಾ ವ್ಯವಹಾರದ ನಿರ್ಧಿಷ್ಟ ಸ್ಥಳದಲ್ಲಿ ತಮ್ಮ ಮೈಕ್ರೊಫೈನಾನ್ಸ್ ಆರ್ಥಿಕ ಕಾರ್ಯಚಟುವಟಿಕೆಗಳ ಬಗ್ಗೆ ವಿವರವಾದ ಫಲಕವನ್ನು ಸಾರ್ವಜನಿಕರಿಗೆ ಅಥವಾ ಗ್ರಾಹಕರಿಗೆ ಕಾಣುವಂತೆ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮೈಕ್ರೊಫೈನಾನ್ಸ್ ಸಾಲ ವಸೂಲು ಮಾಡುವವರು ಸಾಲಗಾರರ ಜೊತೆ ಮಾನವೀಯತೆಯಿಂದ ನಡೆದುಕೊಳ್ಳುವದನ್ನು ಕಲಿಯಬೇಕು. ಕೇವಲ ವ್ಯಾಪಾರದ ದೃಷ್ಠಿಯಿಂದ ನಡೆದುಕೊಂಡಿದ್ದು, ಕಂಡುಬಂದಲ್ಲಿ ದೂರು ಬರದೇ ಇದ್ದರೂ ಸೋಮೋಟೋ ಕೇಸ್ ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.

ವಿವಿಧ ಹಣಕಾಸು ಸಂಸ್ಥೆಗಳು ಸಾಲ ಕೊಟ್ಟ ಮೇಲೆ ಹೇಗೆ ವಸೂಲಾತಿ ಮಾಡಬೇಕೆಂಬುವುದರ ಬಗ್ಗೆ ನಿಯಮಗಳಿವೆ. ವಸೂಲಾತಿ ಮಾಡುವ ನಿಟ್ಟಿನಲ್ಲಿ ಗ್ರಾಹಕರಿಗೆ ತೊಂದರೆ ನೀಡಿದಲ್ಲಿ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳಲಾಗುತ್ತದೆ. ಗ್ರಾಹಕರ ಜೊತೆ ವಿನಯದಿಂದ ನಡೆದುಕೊಳ್ಳಬೇಕು. ಸಾಲ ವಸೂಲಾತಿಯಲ್ಲಿ ನಿಯಮ ಬಾಹೀರವಾಗಿ ಕ್ರಮವಹಿಸಿರುವ ಬಗ್ಗೆ ಈಗಾಗಲೇ ಮಹಾನಗರದಲ್ಲಿ ಒಂದು ಮತ್ತು ಜಿಲ್ಲಾ ಗ್ರಾಮೀಣದಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಹಣಕಾಸು ಸಂಸ್ಥೆಗಳು ಜಿಲ್ಲೆಯ ಜನತೆಯ ಜೊತೆ ವ್ಯವಹಾರ ಮಾಡುವ ಮೊದಲು ಹಣಕಾಸಿನ ವ್ಯವಹಾರದ ಬಗ್ಗೆ, ಸಾಲಪಡೆದವರ ಸ್ಥಿತಿಗತಿ ಬಗ್ಗೆ ತಿಳಿದುಕೊಂಡು ಕೆಲಸ ಮಾಡಬೇಕು. ಬೇರೆ ಬೇರೆ ಮೈಕ್ರೋಫೈನಾನ್ಸದವರು ಜಿಲ್ಲೆಯ ಗ್ರಾಹಕರ ಜೊತೆ ವ್ಯವಹಾರ ಮಾಡಬೇಕಾದಲ್ಲಿ ಮಾಹಿತಿ ಇಲ್ಲದೇ ವ್ಯವಹಾರ ಮಾಡುವಂತಿಲ್ಲ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿಗೆ ಕರೆ ಮಾಡಿ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸೇರಿದಂತೆ ಇತರೆ ಯಾವುದೇ ಹಣಕಾಸು ಸಂಸ್ಥೆಯವರು ಸಾಲ ವಸೂಲಾತಿಯಲ್ಲಿ ಕಿರುಕುಳ ನೀಡಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಅಥವಾ ಟೋಲ್ ಪ್ರೀ ನಂಬರಗೆ ಕರೆ ಮಾಡಿ, ಮಾಹಿತಿ ನೀಡಬಹುದು ಅಥವಾ ದೂರು ನಿವಾರಣಾ ಕೇಂದ್ರಕ್ಕೆ ಖುದ್ದಾಗಿ ಬಂದು ದಾಖಲೆಗಳೊಂದಿಗೆ ದೂರು ನೀಡಬಹುದು. ಮಾಹಿತಿದಾರರು ಬಯಸಿದ್ದಲ್ಲಿ ಅವರ ವಿವರಗಳನ್ನು ಗೌಪ್ಯವಾಗಿಟ್ಟು ಸಂಬಂಧಿಸಿದ ಮೈಕ್ರೊಫೈನಾನ್ಸ್, ಇತರ ಹಣಕಾಸು ಸಂಸ್ಥೆಗಳ ವಿರುದ್ಧ ಸರಕಾರಿ ಕಾನೂನುಗಳ ಪ್ರಕಾರ ಪೋಲೀಸ್ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

ಮಹಾನಗರ ಪೋಲೀಸ್ ಆಯುಕ್ತ ಎನ್.ಶಶಿಕುಮಾರ ಅವರು ಮಾತನಾಡಿ, ನಿನ್ನೆ ದಿನ ಹುಬ್ಬಳ್ಳಿ ಕಮರಿಪೇಟೆಯಲ್ಲಿ ಮೈಕ್ರೊಫೈನಾನ್ಸ್ ಸಾಲ ವಸೂಲಾತಿ ಕಿರುಕಳದ ಮೊದಲ ಪ್ರಕರಣ ದಾಖಲಾಗಿದೆ. ನೋಂದಾಯಿತ ಎಲ್ಲ ತರಹದ ಹಣಕಾಸು ಸಂಸ್ಥೆಗಳ ನವೀಕರಣ ಹಾಗೂ ನೋಂದಣಿ ಸಮಯದ ಕರಾರುಗಳನ್ನು ಒಪ್ಪಂದದ ಪ್ರಕಾರ ಪೂರೈಸಿರುವ ಕುರಿತು ಪರಿಶೀಲಿಸಿ, ವರದಿ ನೀಡಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ.

ನಿಯಮಾನುಸಾರ ಸರಕಾರದ ಅನುಮತಿ ಪಡೆಯದೇ ಹಣಕಾಸಿನ ವ್ಯವಹಾರ ಮಾಡುತ್ತಿರುವ ವ್ಯಕ್ತಿ, ಸಂಸ್ಥೆಗಳ ಪರಿಶೀಲನೆಗೆ ಕ್ರಮವಹಿಸಲಾಗಿದೆ. ಸಾರ್ವಜನಿಕರು ಅಥವಾ ಇಂತಹ ಪ್ರಕರಣಗಳಲ್ಲಿ ನೊಂದ ಗ್ರಾಹಕರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ದೂರು ಕೇಂದ್ರಕ್ಕೆ ಅಥವಾ ಸಹಾಯವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಮೈಕ್ರೊಫೈನಾನ್ಸ್ ಹಾಗೂ ಇತರ ಸಾಲ ನೀಡುವ ಸಂಘಗಳು ಗ್ರಾಮೀಣ ಭಾಗದಲ್ಲಿ ಸಾಲ ವಸೂಲಾತಿಗಾಗಿ ಸಂಘದ ಗುಂಪಿನ ಸದಸ್ಯರನ್ನು, ಗ್ರಾಮದ ಪ್ರಮುಖರನ್ನು ಬಳಸಿಕೊಳ್ಳುತ್ತಿರುವ ಮತ್ತು ಸಾಲಗಾರರ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರು ಮತ್ತು ಒಡನಾಡಿಗಳ ಮೂಲಕವೂ ಸಾಲ ವಸೂಲಾತಿಗೆ ಒತ್ತಡ ಹಾಕುತ್ತಿರುವ ಮಾಹಿತಿ ಬಂದಿದೆ. ಇವುಗಳನ್ನು ಬೀಟ್ ಪೊಲೀಸ್ ಹಾಗೂ ಇತರ ಮೂಲಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಅಂತಹ ಪ್ರಕರಣಗಳು ಖಚಿತ ಪಟ್ಟಲ್ಲಿ ಅಂತಹ ಸದಸ್ಯರ ಹಾಗೂ ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುವದಾಗಿ ಅವರು ತಿಳಿಸಿದರು.

ಆರ್.ಬಿ.ಐ.ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಹಾಗೂ ಧಾರವಾಡ ಜಿಲ್ಲಾ ನೋಡಲ್ ಅಧಿಕಾರಿ ಅರುಣಕುಮಾರ ಅವರು ಮಾತನಾಡಿ, ಮೈಕ್ರೊ ಫೈನಾನ್ಸ್ ವ್ಯವಸ್ಥೆ ಬಂದಿರುವುದು ಮಧ್ಯಮ ವರ್ಗದವರ, ಬಡವರ ಆರ್ಥಿಕ ಶಕ್ತಿ ವೃದ್ಧಿಸಲು. ಸಾಲ ಕೊಡುವಾಗ ಯಾವುದಕ್ಕೆ ಸಾಲ, ಅವರ ಮರುಪಾವತಿ ಶಕ್ತಿ, ಉಪಯುಕ್ತತೆ ತಿಳಿದುಕೊಳ್ಳಬೇಕು. ನೀಡುವ ಸಾಲವು ಸಾಮಾನ್ಯ ಜನರ ಸ್ವಯಂ ಉದ್ಯೋಗ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜಕವಾಗಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ಜಿಲ್ಲಾ ಅಗ್ರಣಿ ಬ್ಯಾಂಕನ ವ್ಯವಸ್ಥಾಪಕ ಪ್ರಭುದೇವ ಎನ್.ಜಿ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕ ರಮೇಶ ಬಗಲಿ ಅವರು ವಿವಿಧ ಹಣಕಾಸು ಸಂಸ್ಥೆಗಳ ಮಾಹಿತಿ ಹಾಗೂ ಅವುಗಳ ನಡೆಸುವ ವ್ಯವಹಾರದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪ ಪೋಲೀಸ್ ಆಯುಕ್ತ ಮಾನಿಂಗ ನಂದಗಾಂವಿ, ಜಿಲ್ಲೆಯ ವಿವಿಧ ತಾಲೂಕುಗಳ ಪೋ ಲೀಸ್ ಅಧಿಕಾರಿಗಳು, ತಹಶಿಲ್ದಾರರು, ಸಹಾಯಕ ನಿಬಂಧಕರು ಸೇರಿದಂತೆ ಜಿಲ್ಲೆಯಲ್ಲಿರುವ ಮೈಕ್ರೋಫೈನಾನ್ಸ್ ದಾರರು, ವಿವಿಧ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು, ಲೇವಾದೇವಿದಾರರು, ಗಿರಿವಿದಾರರು ಉಪಸ್ಥಿತರಿದ್ದರು.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
Share This Article
error: Content is protected !!