ಹುಬ್ಬಳ್ಳಿ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅನುಮತಿ ಕೊಡಿಸಬೇಕು ಎಂದು ಆಗ್ರಹಿಸಿ ನಗರದ ಚಿಟಗುಪ್ಪಿ ಆಸ್ಪತ್ರೆ ಬಳಿಯ ಸರ್ ಸಿದ್ದಪ್ಪ ಕಂಬಳಿ ಪ್ರತಿಮೆ ಬಳಿ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಇಂದಿನಿಂದ ಅನಿರ್ದಿಷ್ಠಾವಧಿ ಆರಂಬಿಸಿದೆ.
ಈಗಾಗಲೇ ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ತೀರ್ಪು ನೀಡಿದೆ. ಆದರೆ ಗೋವಾ ಸರಕಾರ ತನ್ನ ಕ್ಯಾತೆ ಮುಂದುವರೆಸಿದೆ. ಕೇಂದ್ರ ಸರಕಾರ ಈ ವಿಷಯದಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಅದರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕುಮ್ಮಕ್ಕು ಅಡಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಿರಂತರ ಧರಣಿ ಸತ್ಯಾಗ್ರಹಕ್ಕೆ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಎಐಟಿಸಿ, ಕಟ್ಟಡ ಕಾರ್ಮಿಕರ ಸಂಘಟನೆ, ಆಟೋ ಚಾಲಕರ, ನಿವೃತ್ತ ಶಿಕ್ಷಕರ ಕೃಷಿಕ ಸಮಾಜ, ಪಕ್ಷಾತೀತ ಹೋರಾಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ, ಸಂಘಟನೆ ಉಪಾಧ್ಯಕ್ಷ, ಬಾಬಾಜಾನ್ ಮುಧೋಳ, ರೈತ ಸಂಘಟನೆ ಜಿಲ್ಲಾಧ್ಯಕ್ಷ ರವಿ ಕಂಬಳಿ, ಬಿ.ಎಂ. ಹಣಸಿ, ರಾಜು ನಾಯಕವಾಡಿ, ಕುಮಾರ ಸಹಕಾರಿ ಮಹಿಳಾ ಸಂಘಟನೆಯ ಮಾಣಿಕ್ಯ ಚಿಲ್ಲೂರ, ಬಿ.ಎ.ಮುಧೋಳ, ಆಟೋ ಚಾಲಕರ ಸಂಘದ ಹನುಮಂತಪ್ಪ ಪವಾಡಿ, ರಮೇಶ ಭೋಸ್ಲೆ, ಎಸ್.ಬಿ.ಪಾಟೀಲ ಸೇರಿದಂತೆ ಅನೇಕರಿದ್ದರು.
ವರದಿ:ಸುಧೀರ್ ಕುಲಕರ್ಣಿ




