ದಾವಣಗೆರೆ : ಅವರು ನಿರಾಶ್ರಿತರು. ಒಪ್ಪೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು. ಇನ್ನೂ ಕೆಲವರು ತುತ್ತಿನ ಚೀಲ ತುಂಬಿಸಿಕೊಳ್ಳಲು ಮತ್ತೊಬ್ಬರ ಬಳಿ ಕೈಚಾಚುತ್ತಿದ್ದವರು. ಆದ್ರೀಗ ಅವರೆಲ್ಲರೂ ನಿರಾಶ್ರಿತರ ಕೇಂದ್ರದ ಅತಿಥಿಗಳಾಗಿದ್ದಾರೆ. ರೈತರಂತೆ ವ್ಯವಸಾಯದಲ್ಲೂ ತೊಡಗಿಸಿಕೊಂಡು ನಾನಾ ಬೆಳೆ ಬೆಳೆಯುವ ಮೂಲಕ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕ್ರಿಯಾಶೀಲ ತರಬೇತಿ ಪಡೆದು ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ.
ಹೌದು, ಬೆಣ್ಣೆನಗರಿ ದಾವಣಗೆರೆಯ ಕೂಗಳತೆಯ ತುರ್ಚಘಟ್ಟ ಗ್ರಾಮದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರ ಇದೀಗ ಅದೆಷ್ಟೋ ಭಿಕ್ಷುಕರು, ನಿರಾಶ್ರಿತರ ಬದುಕಿನಲ್ಲಿ ಬೆಳಕು ಮೂಡಿಸಿದೆ. ಇಲ್ಲಿರುವ 147 ಜನ ನಿರಾಶ್ರಿತರು ವಿವಿಧ ತರಕಾರಿ ಹಾಗೂ ಬೆಳೆ ಬೆಳೆಯುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ.
ದಾವಣಗೆರೆ ತಾಲೂಕಿನ ತುರ್ಚಗಟ್ಟ ಹಾಗು ಬುಳ್ಳಾಪುರ ಗ್ರಾಮಗಳ ಮಧ್ಯೆ ಸುಮಾರು 10 ಎಕರೆ ವಿಶಾಲ ಜಾಗದಲ್ಲಿ ತಲೆಎತ್ತಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಾಲ್ಕೈದು ವರ್ಷಗಳಿಂದ ಕೃಷಿ, ಹೈನುಗಾರಿಕೆ ಆರಂಭಿಸಲಾಗಿದೆ. ಇದರಲ್ಲಿ ನಿರಾಶ್ರಿತರು ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ರಸ್ತೆ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಎಲ್ಲಾ ಕಡೆ ಭಿಕ್ಷೆ ಬೇಡುವವರನ್ನು ರಕ್ಷಣೆ ಮಾಡಿ ಕರೆತರಲಾಗಿದೆ. ಈ ಕೇಂದ್ರದಲ್ಲಿ ಕರ್ನಾಟಕದ ನಿರಾಶ್ರಿತರಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್ ಸೇರಿ ವಿವಿಧ ರಾಜ್ಯದ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲಾಗಿದೆ. ಕೆಲವರಿಗೆ ಕೃಷಿ ಮಾಡಿದ ಅನುಭವವೂ ಇದೆ. ಜಮೀನು, ಕೊಳವೆ ಬಾವಿ, ಬೆಳೆಯನ್ನು ಕಂಡು ಸಂತಸದಿಂದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
: ಈ ನಿರಾಶ್ರಿತರ ಕೇಂದ್ರದಲ್ಲಿ ಒಟ್ಟು 147 ಜನರಿದ್ದಾರೆ. ಬೀದಿಬದಿ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣದಲ್ಲಿ ರಕ್ಷಣೆ ಮಾಡಿ ಕೇಂದ್ರಕ್ಕೆ ಕರೆತಂದು 1-2 ವರ್ಷ ಇಲ್ಲಿರಲು ಅವಕಾಶ ಕಲ್ಪಿಸಲಾಗುತ್ತದೆ. “ಅವರಿಗೆ ಮೂರು ಹೊತ್ತು ತಿಂಡಿ, ಊಟ ಉಚಿತವಾಗಿ ಕೊಡಲಾಗುತ್ತದೆ. ಅಲ್ಲದೆ ಅವರಿಗೆ ಯೋಗಾಸನ, ಕರಕುಶಲ ತರಬೇತಿ, ಫಿನಾಯಿಲ್ ತಯಾರಿಕೆ, ಆ್ಯಸಿಡ್ (ಶೌಚಾಲಯ ತೊಳೆಯುವ ರಾಸಾಯನಿಕ) ಹೈನುಗಾರಿಕೆ, ಸ್ವಚ್ಛತೆ ಬಗ್ಗೆ ಪಾಠ, ಕ್ರಿಯಾಶೀಲವಾಗಿರುವ ತರಬೇತಿ ಕೊಡಲಾಗುತ್ತದೆ” ಎಂದು ಪ್ರಭಾರ ಅಧೀಕ್ಷಕ ಕಾಶಿನಾಥ್ ಅವರು ಮಾಹಿತಿ ನೀಡಿದರು.
ಅಲ್ಲದೆ ದಿನದ ಲೆಕ್ಕಕ್ಕೆ ಕೆಲಸ ಮಾಡಿದ ಕೂಲಿ 80 ರೂಪಾಯಿಯನ್ನು ಅವರ ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಅವರು ಕೇಂದ್ರದಿಂದ ಬಿಡುಗಡೆಯಾಗಿ ಹೋಗುವ ವೇಳೆ ಅ ಹಣವನ್ನು ಆರ್ಟಿಜಿಎಸ್ ವರ್ಗಾವಣೆ ಮಾಡುವ ಮೂಲಕ ಸ್ವಂತ ಉದ್ಯೋಗ ತೆರೆಯಲು ಹಣ ಕೊಡಲಾಗುತ್ತದೆ ಎಂದು ಕಾಶಿನಾಥ್ ಮಾಹಿತಿ ನೀಡಿದರು. ಕೊನೆದಾಗಿ ಅವರು ತಮ್ಮ ಕುಟುಂಬ ಸೇರುವ ವೇಳೆಗೆ ಅ ಕೂಲಿ ಹಣ 10, 20, 30 ಸಾವಿರ ಆಗಿರುತ್ತದೆ ಎಂದರು. ಯಾರೇ ನಿರಾಶ್ರಿತರ ಇದ್ರು ಕರೆ ಮಾಡಿದ್ರೇ ಅವರನ್ನು ಕರೆತಂದು ಪೋಷಣೆ ಮಾಡುವ ಕೆಲಸ ನಮ್ಮದು. ವಿವಿಧ ತರಹದ ತಿಂಡಿ, ನಾನ್ ವೆಜ್, ಮೊಟ್ಟೆ, ಊಟ ಕೊಡಲಾಗುವುದು ಎಂದು ತಿಳಿಸಿದರು.




