ಬೆಳಗಾವಿ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರೋ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗಿದ್ದು, ಇದರಿಂದ ಅನೇಕ ಅವಾಂತರ ಸೃಷ್ಟಿಯಾಗಿದೆ.
ಜಿಲ್ಲೆಯ ಪ್ರಸಿದ್ಧ ಸವದತ್ತಿಯ ಯಲ್ಲಮ್ಮನ ಗುಡ್ಡದಲ್ಲಿ ಬಿರುಸಿನ ವರ್ಷಧಾರೆಯಾಗಿದ್ದು, ಯಲ್ಲಮ್ಮನ ಗುಡಿಗೆ ಮಳೆ ನೀರು ನುಗ್ಗಿದೆ.ಇದರಿಂದಾಗಿ ಭಕ್ತರ ಸುರಕ್ಷತೆ ದೃಷ್ಟಿಯಿಂದ ದೇಗುಲಗಳ ಗೇಟ್ಗಳನ್ನು ಬಂದ್ ಮಾಡಲಾಗಿದೆ.
ಬೆಂಗಳೂರಲ್ಲಿ ಭಾರೀ ಪ್ರಮಾಣದ ಮಳೆಯಾಗಿ ರಸ್ತೆಯಲ್ಲಿ ನೀರು ನಿಂತು, ಮರಗಿಡಗಳು ಧರೆಗುರುಳಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ಕೊಪ್ಪಳದಲ್ಲಿ ಸುರಿದ ಭಾರೀ ಮಳೆಗೆ ಭತ್ತ ಬೆಳೆ ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನೂ 4 ದಿನಗಳ ಕಾಲ ಮಳೆ ಮುಂದುವರಿಯಲಿದೆ.