ಅಮ್ಮ-ಅಪ್ಪ ಇಲ್ಲದ ಮಕ್ಕಳ ಕಣ್ಣೀರಿಗೆ ಬೆಲೆಯಿಲ್ಲವೇ? ಅಧಿಕಾರಿಗಳ ಕಲ್ಲೆದೆಯ ನಿರ್ಲಕ್ಷ್ಯ
ಕರೆ ಸ್ವೀಕರಿಸದ ತಾಲೂಕು ಅಧಿಕಾರಿಗಳು: ಜಿಲ್ಲಾ ಡಿಡಿಯವರದ್ದು ‘ಏನು ಮಾಡಲಾಗದು’ ಎಂಬ ಅಸಹಾಯಕತೆ!.
ಚೇಳೂರು : ಬಡವರ ಹಾಗೂ ಅನಾಥ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಕೋಟಿ ಕೋಟಿ ಹಣ ವ್ಯಯಿಸುತ್ತಿದ್ದರೂ, ಅಧಿಕಾರಿಗಳ ಕಲ್ಲೆದೆಯ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಚೇಳೂರು ತಾಲೂಕಿನ ನಲ್ಲಗುಟ್ಲಪಲ್ಲಿಯ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, 50ಕ್ಕೂ ಹೆಚ್ಚು ಅನಾಥ ಹಾಗೂ ಏಕಪೋಷಕ ಮಕ್ಕಳ ಬದುಕು ಬೀದಿಗೆ ಬಿದ್ದಿದೆ.
ಸೌಲಭ್ಯಗಳಿದ್ದರೂ ಬಳಕೆಗೆ ಭಾಗ್ಯವಿಲ್ಲ:
ಈ ವಸತಿ ಶಾಲೆಯಲ್ಲಿ ಮಕ್ಕಳಿಗೆ ಬಿಸಿನೀರು ನೀಡಲು ಗೀಸರ್‌ಗಳನ್ನು ತರಲಾಗಿದೆ. ಆದರೆ, ಅವುಗಳನ್ನು ತಂದು ದಿನಗಳೇ ಕಳೆದರೂ ಗೋಡೆಗೆ ಅಳವಡಿಸುವ ಸೌಜನ್ಯವನ್ನು ಅಧಿಕಾರಿಗಳು ತೋರಿಲ್ಲ. ಸೋಲಾರ್ ವ್ಯವಸ್ಥೆಯು ಕೇವಲ ಮಧ್ಯಾಹ್ನದ ಮೇಲೆ ಬಿಸಿನೀರು ನೀಡುವುದರಿಂದ, ಕೊರೆಯುವ ಚಳಿಯಲ್ಲಿ ಬೆಳಿಗ್ಗೆ ಈ ಪುಟ್ಟ ಮಕ್ಕಳು ತಣ್ಣೀರಿನಲ್ಲೇ ಸ್ನಾನ ಮಾಡುತ್ತಿದ್ದಾರೆ. ಇನ್ನು ವರ್ಷದಿಂದ ಯುಪಿಎಸ್ ಬ್ಯಾಟರಿ ಕೆಟ್ಟು ನಿಂತಿದ್ದು, ರಾತ್ರಿಯ ವೇಳೆ ವಿದ್ಯುತ್ ಹೋದಾಗ ಮಕ್ಕಳು ಭಯದಿಂದ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಬಾಲ ಕಾರ್ಮಿಕರಾದ ಅನಾಥ ಮಕ್ಕಳು:
ಶಾಲೆಯಲ್ಲಿ 1 ರಿಂದ 6 ನೇ ತರಗತಿಯಲ್ಲಿ ಓದುತ್ತಿರುವ ಅಪ್ಪ-ಅಮ್ಮ ಇಲ್ಲದ ಹಸುಳೆಗಳ ಕೈಯಲ್ಲಿ ಬಟ್ಟೆ ಒಗೆಯುವಂತೆ ಮಾಡುವುದು ಮಾನವೀಯತೆಯೇ? ವಾಷಿಂಗ್ ಮೆಷಿನ್ ವ್ಯವಸ್ಥೆ ಇದ್ದರೂ ಸಹ, ಮಕ್ಕಳು ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿರುವುದು ಈ ಶಾಲೆಯ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅನಾಥ ಮಕ್ಕಳ ಈ ಶ್ರಮದ ಬದುಕು ಕಲ್ಲು ಮನಸ್ಸಿನವರನ್ನೂ ಕರಗಿಸುವಂತಿದೆ.
ವಾರ್ಡನ್ ಗೈರುಹಾಜರಿ – ಅತಿಥಿ ಶಿಕ್ಷಕರ ಸಾಮ್ರಾಜ್ಯ:
ತಾಲೂಕು ಕಚೇರಿಯಲ್ಲಿ ಮ್ಯಾನೇಜರ್ ಆಗಿರುವ ವಾರ್ಡನ್ ಅವರು ಶಾಲೆಗೆ ಬರುವುದು ಅಪರೂಪ. ಶಾಲೆಯಲ್ಲಿ ಪ್ರತಿಯೊಬ್ಬರೂ ಅತಿಥಿ ಶಿಕ್ಷಕರೇ ಆಗಿದ್ದು, ವಸತಿ ಶಾಲೆಯ ನಿಯಮದಂತೆ ಎಲ್ಲಾ ಶಿಕ್ಷಕರು ರಾತ್ರಿ ಇಲ್ಲೇ ಇರಬೇಕಿದ್ದರೂ, ದಿನಕ್ಕೊಬ್ಬರಂತೆ ‘ಪಾಳಿ’ ಹಾಕಿ ನಾಮಮಾತ್ರಕ್ಕೆ ಉಳಿದುಕೊಳ್ಳುತ್ತಿದ್ದಾರೆ. 50 ಮಕ್ಕಳ ಸುರಕ್ಷತೆಗೆ ಒಬ್ಬರೇ ಶಿಕ್ಷಕರು ಸಾಕೆ? ಅನಾಹುತಗಳಾದರೆ ಯಾರು ಹೊಣೆ?
ಅಧಿಕಾರಿಗಳ ಪಲಾಯನ: ಉತ್ತರಿಸಲಾಗದೆ ಮೌನಕ್ಕೆ ಶರಣು!
ಈ ಗಂಭೀರ ಅವ್ಯವಸ್ಥೆಯ ಕುರಿತು ಸ್ಪಷ್ಟನೆ ಪಡೆಯಲು ಕನ್ನಡಪ್ರಭ ಮುಂದಾದಾಗ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನ ಮೆರೆದಿದ್ದಾರೆ. ಬಾಗೇಪಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹಾಗೂ ಹಾಸ್ಟೆಲ್ ವಾರ್ಡನ್ ಅವರಿಗೆ ಸತತವಾಗಿ 4 ಬಾರಿ ಕರೆ ಮಾಡಿದರೂ, ಅವರು ಕರೆ ಸ್ವೀಕರಿಸದೆ ಪಲಾಯನ ಮಾಡಿದ್ದಾರೆ.ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರಿಸಲಾಗದ ಇಂತಹ ಅಧಿಕಾರಿಗಳು ಆ ಕುರ್ಚಿಯಲ್ಲಿರಲು ಲಾಯಕ್ಕೇ? ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಜಿಲ್ಲಾಡಳಿತಕ್ಕೆ ಆಗ್ರಹ:
ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ‘ವಾರ್ನಿಂಗ್’ ನೀಡಿ ಕೈತೊಳೆದುಕೊಳ್ಳುವ ಅಧಿಕಾರಿಗಳ ಬದಲಿಗೆ, ಅನಾಥ ಮಕ್ಕಳ ಬದುಕಲ್ಲಿ ಆಟವಾಡುತ್ತಿರುವ ಬಾಗೇಪಲ್ಲಿ ತಾಲೂಕು ಕಲ್ಯಾಣಾಧಿಕಾರಿ ಹಾಗೂ ವಾರ್ಡನ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಕೋಟ್ (ಸಮಜಾಯಿಷಿ):
ಜಿಲ್ಲೆಯಲ್ಲಿ ವಾರ್ಡನ್ ಪೋಸ್ಟ್‌ಗಳು ಖಾಲಿ ಇವೆ. ನಮಗೆ 10 ವಾರ್ಡನ್‌ಗಳು ಬೇಕು, ಆದರೆ ಇರುವುದು ಕೇವಲ ಮೂವರು ಮಾತ್ರ. ಹೀಗಾಗಿ ಒಬ್ಬರೇ ಮೂರ್ನಾಲ್ಕು ಹಾಸ್ಟೆಲ್ ಜವಾಬ್ದಾರಿ ನೋಡಿಕೊಳ್ಳಬೇಕಿದೆ. ಬಟ್ಟೆ ಒಗೆಯುವ ಯಂತ್ರ ಕೆಟ್ಟಿರುವ ಕಾರಣ ಮಕ್ಕಳು ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದಾರೆ. ಕಾಯಂ ಶಿಕ್ಷಕರ ನೇಮಕಾತಿ ಸರ್ಕಾರದಿಂದ ಆಗಬೇಕಿದೆ. ಈಗಾಗಲೇ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದೇನೆ. ಸದ್ಯಕ್ಕೆ ಪರಿಸ್ಥಿತಿ ಹೀಗಿದೆ, ಏನು ಮಾಡುವುದು ಎಂದು ತಿಳಿಯುತ್ತಿಲ್ಲ.
ವರದಿ : ಯಾರಬ್. ಎಂ




