ತುರುವೇಕೆರೆ : ತಾಲೂಕಿನ ಮಾಯಸಂದ್ರ ಹೋಬಳಿಯ ಕಣಕೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ನೂತನ ದೇವಾಲಯ ಉದ್ಘಾಟನೆ ಮತ್ತು ಪ್ರತಿಷ್ಠಾಪನೆಯನ್ನು ಫೆಬ್ರವರಿ 04 ರಿಂದ 06 ರವರೆಗೆ ಆಯೋಜಿಸಲಾಗಿದೆ ಎಂದು ಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ಬಾಲಾಜಿ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ (ಶ್ರೀ ನುಡುಕೇರಪ್ಪಸ್ವಾಮಿ ದೇವಾಲಯ) ದೇವಾಲಯವನ್ನು ಬಾಲಾಜಿ ಸೇವಾ ಟ್ರಸ್, ಕಣಕೂರು ಗ್ರಾಮಸ್ಥರು ಹಾಗೂ ಭಕ್ತಾಧಿಗಳ ಸಹಕಾರದೊಂದಿಗೆ ನಿರ್ಮಿಸಲಾಗಿದೆ. ದೇವಾಲಯದ ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ ರೂ ವೆಚ್ಚವಾಗಿದೆ. ದೇವಾಲಯದ ಉದ್ಘಾಟನೆ ಹಾಗೂ ಪ್ರತಿಷ್ಠಾಪನೆಯನ್ನು ಸಹ ತಾಲೂಕಿನ ನಾಗರೀಕರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಬೇಕೆಂಬ ಆಶಯದಿಂದ ತುರುವೇಕೆರೆ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ವತಿಯಿಂದಲೇ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿದೆ. ಟಿಟಿಡಿಯ ಪುರೋಹಿತರೇ ಕಲ್ಯಾಣೋತ್ಸವ ನೆರವೇರಿಸಲಿದ್ದು, ತಾಲೂಕಿನ ನಾಗರೀಕರು ಸ್ವಾಮಿಯ ಕಲ್ಯಾಣೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ವೈಭವವನ್ನು ಕಣ್ತುಂಬಿಕೊಳ್ಳಬೇಕೆAದರು.
ಫೆಬ್ರವರಿ 04 ರಂದು ಬುಧವಾರ ಗುರುಪ್ರಾರ್ಥನೆ, ಭಾಗೀರಥಿ ಪೂಜೆ, ಪುಣ್ಯಾಹ, ರಕ್ಷಾಬಂಧನ, ಮಹಾಗಣಪತಿ, ವೀಶ್ವಕ್ಷೇನಾ, ವಾಸ್ತು, ಪರಿವಾರ, ಮನೋನ್ಮನ ಪ್ರಮಾಣ ಹೋಮ ಸೇರಿದಂತೆ ವಿವಿಧ ಶಾಂತಿ ಹೋಮಗಳು, ವಾಸ್ತುಬಲಿ, ವಾಸ್ತು ಪರಿಯಗ್ನೀಕರಣ, ಮಹಾಮಂಗಳಾರತಿ ನೆರವೇರಲಿದೆ. ಫೆಬ್ರವರಿ 05 ರಂದು ನವಗ್ರಹ, ಗ್ರಾಮ ದೇವತೆ, ಸುದರ್ಶನ ನಾರಸಿಂಹ ಹೋಮಗಳು, ಸಂಜೆ ಕಲಶಾರಾಧನೆ, ಪಂಚಸೂಕ್ತ, ಪರಿವಾರ ಹೋಮಗಳು, ಸ್ವಾಮಿಯವರಿಗೆ ಧಾನ್ಯಾಧಿವಾಸ, ಪುಷ್ಪಾಧಿವಾಸ್, ಫಲಾಧಿವಾಸ, ವಸ್ತ್ರಾಧಿವಾಸ, ರತ್ನಾಧಿವಾಸ, ಅಷ್ಟವಧಾನ ಸೇವೆ ನಡೆಯಲಿದೆ. ಫೆಬ್ರವರಿ 06 ರಂದು ಯೋಗಪೀಠಾರ್ಚನೆ, ಅಷ್ಟಬಂಧನ, ಪ್ರಾಣ ಪ್ರತಿಷ್ಠಾಪನಾ, ತತ್ವನ್ಯಾಸ, ಷೋಡನ್ಯಾಸ, ನಯನೋನ್ಮಿಲನ ಹಾಗೂ ಪ್ರಧಾನ ದೇವತೆ ಹೋಮಗಳು, ಮಹಾಪೂರ್ಣಾಹುತಿ, ಮೂಲದೇವರಿಗೆ ಫಲಪಂಚಾಮೃತ ಅಭಿಷೇಕ, ಕುಂಭಾಭಿಷೇಕ, ವಿಮಾನಗೋಪುರಕ್ಕೆ ಅಭಿಷೇಕ, ಅಲಂಕಾರ, ಷೋಡಷೋಪಚಾರ ಪೂಜೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರುತ್ತದೆ. ಎಂದರು.
ಫೆಬ್ರವರಿ 06 ರಂದು ನಡೆಯುವ ಅಭೂತಪೂರ್ವ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ತಾಲೂಕು ಹಾಗೂ ವಿವಿದೆಢೆಯಿಂದ ಸುಮಾರು 50 ರಿಂದ 60 ಸಾವಿರ ಜನರು ಬರುವ ನಿರೀಕ್ಷೆಯನ್ನು ಹೊಂದಲಾಗಿದೆ. ಹಿರಿಯ ನಾಗರೀಕರಿಗೆ, ವಿಶೇಷಚೇನರಿಗೆ ಸೇರಿದಂತೆ ಭಕ್ತಾಧಿಗಳಿಗೆ ತೊಂದರೆಯಾಗದಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಹಿತರಕರ ಘಟನೆ ಸಂಭವಿಸದಂತೆ 300 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು, ಅಗ್ನಿಶಾಮಕ ದಳ, ತುರ್ತು ವೈದ್ಯಕೀಯ ಸೌಲಭ್ಯ ಎಲ್ಲವನ್ನೂ ಸ್ಥಳದಲ್ಲಿ ವ್ಯವಸ್ಥೇ ಮಾಡಲಾಗಿದೆ. ಎಲ್ಲಾ ಭಕ್ತರಿಗೂ ವಿಶೇಷ ಲಾಡು ಪ್ರಸಾದ, ಮೂರು ದಿನಗಳ ಕಾಲ ಮಹಾದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಗೋಷ್ಟಿಯಲ್ಲಿ ಉದ್ಯಮಿ ದೇವರಾಜು, ರೈತ ಸಂಘದ ಅಧ್ಯಕ್ಷ ಕಣಕೂರು ಚಂದ್ರಶೇಖರ್, ಯುವ ಮುಖಂಡ ಕುಮಾರ್, ಮಾಜಿ ಪ್ರಧಾನ ಟಿ.ಜವರಪ್ಪ, ಗುಡಿಗೌಡರಾದ ಕೆ.ಎಸ್.ಗಂಗಯ್ಯ, ಜಿ.ಸಿ.ಶಿವಕುಮಾರ್, ಎನ್.ಸತೀಶ್, ಕೆ.ಎಲ್.ರಾಜು, ಪಿಎಸಿಎಸ್ ಅಧ್ಯಕ್ಷ ಶ್ರೀನಿವಾಸ್, ಅರ್ಚಕರಾದ ಸುದರ್ಶನ್, ಹುಚ್ಚೇಗೌಡ, ನರಸಿಂಹಮೂರ್ತಿ, ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




