Ad imageAd image

ಶಾಸಕರಿಂದ ಪಶು ಚಿಕಿತ್ಸಾ ಕೇಂದ್ರ ಉದ್ಘಾಟನೆ

Bharath Vaibhav
ಶಾಸಕರಿಂದ ಪಶು ಚಿಕಿತ್ಸಾ ಕೇಂದ್ರ ಉದ್ಘಾಟನೆ
WhatsApp Group Join Now
Telegram Group Join Now

ಔರಾದ:- ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಪಶು ವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಜುಲೈ 31 ರಂದು ಉದ್ಘಾಟಿಸಿದರು.

ಬಳಿಕ‌ ಮಾತನಾಡಿದ ಅವರು ಮೂಕ ಪ್ರಾಣಿಗಳಿಗೂ ಆರೋಗ್ಯ ಸೇವೆ ಸಿಗಬೇಕು. ಅವುಗಳ ರಕ್ಷಣೆಯಾಗಬೇಕು ಎಂಬ ಸದಾಶಯದೊಂದಿಗೆ ಹಿಂದೆ ಪಶು ಸಂಗೋಪನೆ ಸಚಿವನಾಗಿದ್ದಾಗ ಔರಾದ(ಬಿ) ಪಟ್ಟಣದಲ್ಲಿ ಹೈಟೆಕ್ ಪಶು ಆಸ್ಪತ್ರೆ ನಿರ್ಮಿಸಲು ಅನುದಾನ ಒದಗಿಸಿ, ಕೆಲಸಕ್ಕೆ ಚಾಲನೆ ನೀಡಿದ್ದೆ. ಇದೀಗ ಕೆಲಸ ಪೂರ್ಣಗೊಂಡು ಸುಂದರವಾದ ಪಶು ಆಸ್ಪತ್ರೆ ಸಿದ್ಧವಾಗಿದೆ ಎಂದರು.

3.5 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಪಶು ಚಿಕಿತ್ಸಾ ಕೇಂದ್ರದಲ್ಲಿ‌ ಪ್ರಾಣಿಗಳಿಗಾಗಿ ಉತ್ತಮ ಲ್ಯಾಬ್, ಆಪರೇಷನ್ ಥೇಟರ್, ಎಕ್ಸರೇ ಸೇರಿದಂತೆ ಜಾನುವಾರುಗಳ‌ ಚಿಕಿತ್ಸೆಗೆ ಬೇಕಿರುವ ಎಲ್ಲ ಸೌಕರ್ಯಗಳು ಇರಲಿವೆ. ಈ‌ ಪಶು ಆಸ್ಪತ್ರೆಯಿಂದ ತಾಲ್ಲೂಕಿನ ರೈತರಿಗೆ ಸಾಕಷ್ಟು ನೆರವಾಗಲಿದೆ ಎಂದು ಮಾಹಿತಿ ನೀಡಿದರು.

ಗೋಮಾತೆಯ ಬಗ್ಗೆ ತಾಯಿಯ ರೀತಿಯಲ್ಲಿ ಪೂಜ್ಯ ಭಾವನೆಯಿದೆ. ಎಲ್ಲ ಕಾರ್ಯಕ್ರಮಗಳಿಗೂ ಮುನ್ನ ಗೋಮಾತೆಯನ್ನು ಪೂಜಿಸುತ್ತಾ‌ ಬಂದಿದ್ದು, ಅದರಂತೆ ಗೋಮಾತೆಗೆ ಪೂಜೆ ನೆರವೇರಿಸಿ ಪಶು‌‌ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಮೂಕ ಪ್ರಾಣಿಗಳ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಲಭಿಸಬೇಕು. ಗೋಮಾತೆ ಒಳಗೊಂಡು ಎಲ್ಲ ಜಾನುವಾರುಗಳ ಸಂರಕ್ಷಣೆಯಾಗಬೇಕು ಎಂಬ ಸದಾಶಯದೊಂದಿಗೆ ಕೆಲಸ ಮಾಡುತ್ತಿದ್ದು, ಹಿಂದೆ ಪಶು ಸಂಗೋಪನಾ ಸಚಿವನಾಗಿದ್ದ ಸಂದರ್ಭದಲ್ಲಿ ಈ ದಿಶೆಯಲ್ಲಿ ಹಲವಾರು ಕೆಲಸಗಳನ್ನು ಮಾಡಿದ್ದೇನೆ ಎಂದರು.

ಕ್ಷೇತ್ರದ ಜನತೆಯ ಆಶೀರ್ವಾದದಿಂದಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಅವರ ನಿರೀಕ್ಷೆಯಂತೆ ಔರಾದ(ಬಿ) ಮತಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದೇನೆ. ಹೆಡಗಾಪೂರ ಗ್ರಾಮದಲ್ಲಿ ಜಾನುವಾರು ತಳಿ ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರವೂ ಕೂಡ ಶೀಘ್ರ ನಿರ್ಮಾಣವಾಗಲಿದೆ. ಸಿಪೆಟ್ ಕೇಂದ್ರದ ಕೆಲಸವನ್ನೂ ಕೂಡ ಆರಂಭಿಸಲಾಗುವುದು. ಅದರಂತೆ ಕ್ಷೇತ್ರದಲ್ಲಿ ಅಂಬೇಡ್ಕರ್, ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ. ರಸ್ತೆ, ಕುಡಿಯುವ ನೀರು ಪೂರೈಕೆ ಒಳಗೊಂಡು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಜನತೆಯ ಬೇಡಿಕೆಗೆ ಅನುಗುಣ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಜಾನುವಾರುಗಳ ಸಂರಕ್ಷಣೆಯ ದೃಷ್ಡಿಯಿಂದ ಹಿಂದೆ ಆರಂಭಿಸಿದ ಪಶು ಸಂಜೀವಿನಿ ಅಂಬ್ಯುಲೆನ್ಸ್, ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ‌, ಗೋಶಾಲೆಗಳ ನಿರ್ಮಾಣ ಸೇರಿದಂತೆ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಹಿಂದಿನ ಎಲ್ಲಾ ಯೋಜನೆಗಳನ್ನು ಆರಂಭಿಸಬೇಕು ಎಂದು‌ ಸರ್ಕಾರಕ್ಕೆ ಒತ್ತಾಯಿಸಿದರು.

ಔರಾದ(ಬಿ) ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಫಾಹಿಮ್ ಖುರೇಶಿ, ಮುಖಂಡರಾದ ಸುರೇಶ ಭೋಸ್ಲೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವಾಜಿರಾವ ಕಾಳೆ, ರಂಗರಾವ ಜಾಧವ, ಶಿವಾನಂದ ವಡ್ಡೆ, ಬಸವರಾಜ ಪಾಟೀಲ, ಶಿವರಾಜ ಅಲ್ಮಾಜೆ, ಕೇರಬಾ ಪವಾರ, ಖಂಡೋಬಾ ಕಂಗಟೆ, ಸಂತೋಷ ಪೋಕಲವಾರ, ಸಂಜು ವಡೆಯರ್, ಶಿವಕುಮಾರ ಪಾಂಚಾಳ, ಸಾಗರ ಪಾಟೀಲ, ವಿನಾಯಕ ಜಗದಾಳೆ, ಬಾಬುರಾವ ತೋರ್ಣಾವಾಡಿ, ಅಶೋಕ ಅಲ್ಮಾಜೆ, ಯೋಗೇಶ ಪಾಟೀಲ, ಪ್ರದೀಪ ಪವಾರ, ರವೀಂದ್ರ ರೆಡ್ಡಿ, ಸಚಿನ ಬಿರಾದಾರ, ಗಣೇಶ ಕಾರೆಗಾವೆ, ಪ್ರವೀಣ ಕಾರಬಾರಿ, ಭರತ ಕದಂ, ರಾಜೇಂದ್ರ ಮಾಳಿ, ಸುಜಿತ ರಾಠೋಡ ಸೇರಿದಂತೆ ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ:-ಸೂರ್ಯಕಾಂತ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!