ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ ನೀಡಲು ನಿಗದಿಗೊಳಿಸಿರುವ 1.20 ಲಕ್ಷ ರೂ. ಕನಿಷ್ಠ ಆದಾಯ ಮಿತಿಯನ್ನು ಮೂರು ಲಕ್ಷ ರೂ.ಗೆ ಹೆಚ್ಚಿಸುವ ಸಂಬಂಧ ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಂಗಳವಾರ ಬಿಜೆಪಿಯ ಡಾ.ಸಿ.ಎನ್.ಅಶ್ವಥ್ ನಾರಾಯಣ ವಿಚಾರ ಪ್ರಸ್ತಾಪಿಸಿ, ನಗರ ಪ್ರದೇಶದಲ್ಲಿ ಶೇಕಡ 50ರಷ್ಟು ಜನಕ್ಕೆ ಬಿಪಿಎಲ್ ಕಾರ್ಡ್ ಕೊಡಬೇಕು. ಬೆಂಗಳೂರು ನಗರದಲ್ಲಿ ಶೇಕಡ 15 ರಷ್ಟು ಇಲ್ಲ. ಆದಯ ಮಿತಿ ಹೆಚ್ಚಿಸಿ ಬಿಪಿಎಲ್ ಕಾರ್ಡ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಸಚಿವರು, ಆಡಳಿತ ಸುಧಾರಣಾ ಆಯೋಗ ಬಿಪಿಎಲ್ ಪಡಿತರ ಚೀಟಿ ನೀಡಲು ಕನಿಷ್ಠ ಆದಾಯ ಮಿತಿ ಮೂರು ಲಕ್ಷ ರೂ.ಗೆ ಏರಿಸುವ ಪ್ರಸ್ತಾಪವಿಟ್ಟಿದೆ. ರಾಜ್ಯದ ಶೇಕಡ 73 ರಷ್ಟು ಜನ ಫಲಾನುಭವಿಗಳಿದ್ದರೂ ಹೊಸದಾಗಿ ಬಿಪಿಎಲ್ ಕಾರ್ಡಿಗೆ ಅರ್ಜಿಗಳು ಬರುತ್ತಿವೆ.
ಈ ನಡುವೆ ಕೇಂದ್ರ ಸರ್ಕಾರವು ರಾಜ್ಯದಲ್ಲಿ 7.76 ಲಕ್ಷ ಕಾರ್ಡ್ ಗಳು ಬಿಪಿಎಲ್ ವ್ಯಾಪ್ತಿಗೆ ಬರುವುದಿಲ್ಲ. ಮರುಪರಿಶೀಲನೆ ನಡೆಸಿ ಎಪಿಎಲ್ ಗೆ ಬದಲಾವಣೆ ಮಾಡುವಂತೆ ಸೂಚಿಸಿದೆ.
ರಾಜ್ಯದಲ್ಲಿ ಶೇಕಡ 50ರಷ್ಟು ಬಿಪಿಎಲ್ ಕಾರ್ಡ್ ಗಳ ಪರಿಶೀಲನೆಯಾಗಿದ್ದು, ಉಳಿದ ಕಾರ್ಡ್ ಗಳ ಪರಿಶೀಲನೆ ನಡೆದಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 1.24 ಕೋಟಿ ಬಿಪಿಎಲ್ ಪಡಿತರ ಚೀಟಿಗಳಿದ್ದು, 4.50 ಕೋಟಿ ಫಲಾನುಭವಿಗಳಿದ್ದಾರೆ. ಜನಸಂಖ್ಯೆಯ ಶೇಕಡ 73 ರಷ್ಟು ಮಂದಿ ಫಲಾನುಭವಿಗಳಾಗಿದ್ದಾರೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಶೇಕಡ 52ರಷ್ಟು ದಾಟಿಲ್ಲ ಎಂದು ಹೇಳಿದ್ದಾರೆ.




