ಬೆಂಗಳೂರು: ಮಾಸಿಕ 15,000 ರೂ. ನಿಶ್ಚಿತ ಗೌರವಧನ ನೀಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 7ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದಾರೆ.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಕೆಲಸ ಸ್ಥಗಿತಗೊಳಿಸಿ ಹೋರಾಟ ಕೈಗೊಳ್ಳಲಿದ್ದಾರೆ. ಮೊದಲ ದಿನ ಸುಮಾರು 30,000 ಮಹಿಳೆಯರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸ್ಪಷ್ಟ ಭರವಸೆ ನೀಡುವವರೆಗೆ ಹೋರಾಟ ಮುಂದುವರೆಸುವುದಾಗಿ ಅವರು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಸೇರಿ ಹಲವು ಇಲಾಖೆಗಳ ಕೆಲಸ ಮಾಡುತ್ತಿದ್ದರೂ ಕಡಿಮೆ ಗೌರವಧನಕ್ಕೆ ದುಡಿಯುವಂತಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಗೌರವಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ಒಟ್ಟು 15000 ರೂ. ಮಾಸಿಕ ಗೌರವಧನ ನಿಗದಿಯಾಗಬೇಕು. ನಗರದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 2000 ರೂ. ಗೌರವಧನ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಲಾಗಿದೆ.