ರಾಮದುರ್ಗ : ರಾಮದುರ್ಗ ತಾಲೂಕಿನಲ್ಲಿ ಇಂದು ಮುಂಬರುವ : 2026-27 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡದ ವರೆಗೆ ನೂತನ ರೈಲ್ವೆ ಮಾರ್ಗ ಅನುಷ್ಟಾನಗೊಳಿಸಲೇ ಬೇಕೆಂದು ಒತ್ತಾಯಿಸಿ ಶುಕ್ರವಾರ ಪಟ್ಟಣದ ಹುತಾತ್ಮ ಸರ್ಕಲ್ ನಲ್ಲಿ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು. ಹೋರಾಟ ಸಮಿತಿಯ ಮುಖಂಡರು ಹಾಗೂ ಗಣ್ಯರು ಸಸಿಗೆ ನೀರುಣಿಸುವ ಮೂಲಕ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಲೋಚನಾ ಯಾದವಾಡ, ಸರಸ್ವತಿ ಮಾಲಶೆಟ್ಟಿ, ಪದ್ಮಾವತಿ,ಸರಳಾ ಪತ್ತೇಪೂರ ಗೈಬು ಜೈನೆಖಾನ,ಜಗದೀಶ ದೇವರೆಡ್ಡಿ , ಶಫೀ ಬೆಣ್ಣಿ, ವಿಜಯ ನಾಯಕ್, ವಿಜಯ ಗುಡದಾರಿ ಮಾತನಾಡಿ ಲೋಕಾಪೂರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲ್ವೆ ಮಾರ್ಗಕ್ಕಾಗಿ 2019 ರಲ್ಲೇ ಸರ್ವೆ ಕಾರ್ಯ ಮುಗಿದಿದೆ. ಆದರೆ ಅಂದಿನ ಅಧಿಕಾರಿಗಳು ನೀಡಿದ ತಪ್ಪು ವರದಿಯಿಂದ ಈ ಯೋಜನೆ ನೆನೆಗುದಿಗೆ ಬಿದ್ದಿರುವುದು ವಿಷಾದದ ಸಂಗತಿ.
ಇತ್ತೀಚೆಗೆ ಕುತ್ಬುದ್ದಿನ್ ಕಾಜಿಯವರ ನೇತೃತ್ವದಲ್ಲಿ ಲೋಕಾಪೂರ, ರಾಮದುರ್ಗ ಹಾಗೂ ಸವದತ್ತಿ ಕ್ಷೇತ್ರದ ಜನತೆಯಿಂದ ಮತ್ತೇ ನಿರಂತರ ಹೋರಾಟ ನಡೆಸಲಾಗುತ್ತಿದೆ. ಮತ್ತು ಈಗಾಗಲೇ 2024ರ ಡಿಸೆಂಬರ್ ನಲ್ಲಿ ರಾಮದುರ್ಗ ಪಟ್ಟಣದಲ್ಲಿ ಬೃಹತ್ ಪ್ರಮಾಣದ ಹೋರಾಟ ಕೂಡ ಮಾಡಲಾಗಿದೆ. ಲೋಕಾಪೂರದಿಂದ ಧಾರವಾಡ ರೈಲ್ವೆ ಮಾರ್ಗ ನಿರ್ಮಾಣದಿಂದ ಈ ಭಾಗದ ಕೋಟ್ಯಂತರ ಭಕ್ತರು ಬರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಯಲ್ಲಮ್ಮ ದೇವಸ್ಥಾನ. ಶಿರಸಂಗಿ ಕಾಳಮ್ಮ, ಶಬರಿ ಕೊಳ್ಳ, ಗೊಡಚಿ ವೀರಭದ್ರೇಶ್ವರ, ರಾಮದುರ್ಗ ಶಿವನ ಮೂರ್ತಿ ದೇವಸ್ಥಾನಗಳ ದರ್ಶನ ಮತ್ತು ಪ್ರವಾಸಿ ತಾಣಗಳ ಭೇಟಿ ಸುಗಮ ಮತ್ತು ಅಗ್ಗವಾಗಲಿದೆ. ಆದ್ದರಿಂದ 2026-27 ನೇ ಸಾಲಿನ ಕೇಂದ್ರ ಬಜೆಟ್ ನಲ್ಲೇ ಈ ಯೋಜನೆ ಅನುಷ್ಠಾನಗೊಳಿಸುವ ಜತೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸುಲೋಚನಾ ಯಾದವಾಡ, ಸರಸ್ವತಿ ಮಾಲಶಟ್ಟಿ , ಪದ್ಮಾವತಿ, ಸರಳಾ ಪತ್ತೇಪುರ, ಗೈಬು ಜೈನೆಖಾನ್, ಜಗದೀಶ್ ದೇವರೇಡ್ಡಿ, ಶಫಿ ಬೆಣ್ಣಿ, ವಿಜಯ ನಾಯ್ಕ್, ವಿಜಯ್ ಗುಡದಾರಿ, ಎಂ ಕೆ ಯಾದವಾಡ, ಚಂದ್ರು ಮಾಳದಕರ, ಶ್ರೀನಿವಾಸಗೌಡ ಪಾಟೀಲ, ಮುರ್ತುಜಅಲಿ ಪೆಂಡಾರಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ಮಂಜುನಾಥ ಕಲಾದಗಿ




