ನ್ಯೂಯಾರ್ಕ್(ಯುಎಸ್ಎ): ಭಾರತ ಮತ್ತು ಪಾಕಿಸ್ತಾನವನ್ನು ಅಮೆರಿಕ ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನಾವು ಪ್ರೋತ್ಸಾಹಿಸಬಹುದಷ್ಟೇ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಗುರುವಾರ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.
“ಹೀಗಿದ್ದರೂ ಎರಡು ಪರಮಾಣು ಶಕ್ತಿಗಳ ನಡುವಿನ ದೊಡ್ಡ ಸಂಘರ್ಷದ ಬಗ್ಗೆ ನಮಗೆ ಕಳವಳವಿದೆ” ಎಂದು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಭಾವ್ಯ ಪರಮಾಣು ಯುದ್ಧದ ಬಗ್ಗೆ ಟ್ರಂಪ್ ಆಡಳಿತ ಎಷ್ಟು ಆತಂಕ ಹೊಂದಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು.
ವಾಷಿಂಗ್ಟನ್ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಸಾಧ್ಯವಾದಷ್ಟು ಮಟ್ಟಕ್ಕೆ ತಗ್ಗಿಸಲು ಬಯಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿರುವುದನ್ನು ವ್ಯಾನ್ಸ್ ಇದೇ ವೇಳೆ ಉಲ್ಲೇಖಿಸಿದರು.
“ಆದಾಗ್ಯೂ, ನಾವು ಈ ದೇಶಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮೂಲಭೂತವಾಗಿ, ಭಾರತವು ಪಾಕಿಸ್ತಾನದ ಮೇಲೆ ತನ್ನ ಹಿಡಿತ ಹೊಂದಿದೆ. ಪಾಕಿಸ್ತಾನವು ಭಾರತಕ್ಕೆ ಪ್ರತಿಕ್ರಿಯಿಸಿದೆ. ಸ್ವಲ್ಪ ಮಟ್ಟಿಗೆ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರೋತ್ಸಾಹಿಸುವುದನ್ನು ನಾವು ಮಾಡಬಹುದು. ಆದರೆ ಇದಕ್ಕೂ ಮೇಲಾಗಿ ನಮ್ಮ ವ್ಯವಹಾರವಲ್ಲದ ವಿಚಾರದಲ್ಲಿ ಭಾಗಿಯಾಗುವುದಿಲ್ಲ” ಎಂದು ವ್ಯಾನ್ಸ್ ಹೇಳಿದರು.
“ಅಮೆರಿಕವು ಭಾರತೀಯರಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಪಾಕಿಸ್ತಾನಿಗಳಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಾವು ಹೇಳಲಾಗದು. ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಮುಂದುವರಿಸಬೇಕಿದೆ ಎಂದರು.