ಲಂಡನ್ (ಲಾಡ್ಸ್): ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಂದು ಇಲ್ಲಿನ ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಗಳಿಸಿರುವ ಲಾಡ್ಸ್ ಮೈದಾನದಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ.
ಐದು ಟೆಸ್ಟ್ ಗಳ ಸರಣಿಯಲ್ಲಿ ಎರಡು ಟೆಸ್ಟ್ ಗಳನ್ನು ಆಡಲಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಗೆದ್ದಿವೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಭಾರತ ಮೊದಲ ಟೆಸ್ಟ್ ಗೆ ಹೋಲಿಸಿದರೆ ಎರಡನೇ ಟೆಸ್ಟ್ ನಲ್ಲಿ ಅತ್ಯುತ್ತಮ ಬದಲಾವಣೆಯೊಂದಿಗೆ ಸುಧಾರಿತ ಪ್ರದರ್ಶನ ನೀಡಿತು.
ಎರಡನೇ ಟೆಸ್ಟ್ ನಲ್ಲಿ ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಭಾರತ ಉತ್ತಮ ನಿರ್ವಹಣೆ ತೋರಿತು. ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಆಕಾಶ ದೀಪ್ ದ್ವಿತೀಯ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಭಾರತದ ಗೆಲುವಿಗೆ ಶ್ರಮಿಸಿದ್ದರು.
ನಾಯಕ ಶುಭಮಾನ್ ಗಿಲ್ ಎರಡೂ ಇನ್ನಿಂಗ್ಸ್ ಗಳಲ್ಲಿಯೂ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಾಳೆಯ ಪಂದ್ಯಕ್ಕೆ ಬದಲಾವಣೆಯ ಸಾಧ್ಯತೆ ಕಡಿಮೆ ಇದೆಯಾದರೂ ಜಸ್ಪ್ರಿತ್ ಬೂಮ್ರಾ ಲಭ್ಯರಾದರೆ ಇರುವ ತಂಡದಲ್ಲಿರುವ ಯಾವ ಬೌಲರ್ ಸ್ಥಾನ ಕಳೆದುಕೊಳ್ಳಲಿದ್ದಾರೆಂಬುದು ಕುತೂಹಲ ಏಕೆಂದರೆ ಸಿರಾಜ್ ಕೂಡ ಉತ್ತಮ ಬೌಲಿಂಗ್ ನಿರ್ವಹಣೆ ತೋರಿದ್ದಾರೆ. ಹೀಗಾಗಿ ಬೂಮ್ರಾ ಆಡಿಸುವ ಸಲುವಾಗಿ ಬದಲಾವಣೆ ಮಾಡಬೇಕೆಂದರೆ ಕನ್ನಡಿಗ ಪ್ರಸಿದ್ದ ಕೃಷ್ಣ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಯ ಸಾಧ್ಯತೆ ಇಲ್ಲವಾದರೂ ಮತ್ತೋರ್ವ ಕನ್ನಡಿಗ ಕರುಣ್ ಎರಡೂ ಟೆಸ್ಟ್ ಗಳಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಆದರೆ ಅವರಿಗೆ ಮತ್ತೇ ಸ್ಥಾನ ಸಿಗುವ ಸಾಧ್ಯತೆ ಇದೆ.