ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಅಂತಿಮ ಹಂತದಲ್ಲಿದ್ದು, ಮಾರ್ಚ್ 9 ರಂದು ದುಬೈನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಹೈವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಭಾರತ ಫೈನಲ್ಗೆ ಎಂಟ್ರೆ ಕೊಟ್ಟರೆ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸುವ ಮೂಲಕ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿದೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಈ ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಎಚ್ಚರಿಕೆ ನೀಡಿದ್ದಾರೆ. ದುಬೈನಲ್ಲಿ ಭಾರತ ನಿಧಾನಗತಿಯ ಪಿಚ್ ಬಗ್ಗೆ ಚೆನ್ನಾಗಿ ತಿಳಿದಿದೆ. ಆದರೆ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ತಮ್ಮ ತಂಡವು ಸವಾಲಿಗೆ ಸಿದ್ಧವಾಗಿದೆ ಎಂದು ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ. ಭಾರತ ವಿರುದ್ಧದ ಫೈನಲ್ ಪಂದ್ಯಕ್ಕಾಗಿ ನ್ಯೂಜಿಲೆಂಡ್ ತಂಡ ಗುರುವಾರ ಸಂಜೆ ದುಬೈ ತಲುಪಿದೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಚೆಲ್ ಸ್ಯಾಂಟ್ನರ್, ‘ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿದೆ. ಅವರಿಗೆ ಪಿಚ್ ಬಗ್ಗೆ ಚೆನ್ನಾಗಿ ತಿಳಿದಿದೆ. ನಾವು ಹೇಗೆ ಆಡಲು ಬಯಸುತ್ತೇವೆ ಎಂಬುದನ್ನು ಪಿಚ್ ಸ್ವಲ್ಪ ಮಟ್ಟಿಗೆ ತಿಳಿಸಿದೆ. ಲಾಹೋರ್ನಲ್ಲಿ ನಮಗೆ ಸಿಕ್ಕ ಪಿಚ್ಗಿಂತ ಇದು ಸ್ವಲ್ಪ ನಿಧಾನವಾಗಿರಬಹುದು ಆದರೆ ನಾವು ಹೋರಾಡಲು ಸಿದ್ಧರಿದ್ದೇವೆ ಎಂದು ಮಿಚೆಲ್ ಸ್ಯಾಂಟ್ನರ್ ಗೆಲುವಿನ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. : ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ನಿವೃತ್ತಿ? ಚಾಂಪಿಯನ್ಸ್ ಟ್ರೋಫಿ ಗುಂಪು ಹಂತದಲ್ಲಿ ದುಬೈನಲ್ಲಿ ಭಾರತದ ವಿರುದ್ಧ ಆಡಿದ ಅನುಭವದಿಂದ ನ್ಯೂಜಿಲೆಂಡ್ ಸ್ವಲ್ಪ ಸಮಾಧಾನ ಪಡೆಯಬಹುದು. ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 44 ರನ್ಗಳಿಂದ ಸೋಲಿಸಿತ್ತು.
ನಾವು ಉತ್ತಮ ತಂಡದ ವಿರುದ್ಧ ಆಡುತ್ತಿದ್ದೇವೆ. ಕಳೆದ ಪಂದ್ಯಕ್ಕಿಂತ ನಾವು ಅವರ ವಿರುದ್ಧ ಉತ್ತಮವಾಗಿ ಪ್ರದರ್ಶನ ನೀಡುತ್ತೇವೆ ಅಂದುಕೊಳ್ಳುತ್ತೇನೆ. ನಾವು ಸ್ವಲ್ಪ ಲಯದಲ್ಲಿದ್ದೇವೆ. ಇದು ಮುಂದುವರಿಯುತ್ತದೆ ಎಂದು ಆಶಿಸುತ್ತೇನೆ ಎಂದು ಮಿಚೆಲ್ ಸ್ಯಾಂಟ್ನರ್ ತಿಳಿಸಿದ್ದಾರೆ. ನ್ಯೂಜಿಲೆಂಡ್ ತಂಡವು ತಮ್ಮ ಕೊನೆಯ ಗುಂಪು ಪಂದ್ಯ, ಸೆಮಿಫೈನಲ್ ಮತ್ತು ಫೈನಲ್ಗಾಗಿ ಕಡಿಮೆ ಅವಧಿಯಲ್ಲಿ ಪಾಕಿಸ್ತಾನ ಮತ್ತು ದುಬೈ ನಡುವೆ ಪ್ರಯಾಣಿಸಬೇಕಾಯಿತು.
ಆದರೆ ಸ್ಯಾಂಟ್ನರ್ ಅವರು ಕಳೆದ ಕೆಲವು ದಿನಗಳಲ್ಲಿ ತಂಡವು ಬಿಡುವಿಲ್ಲದ ವೇಳಾಪಟ್ಟಿಗೆ ಹೊಂದಿಕೊಂಡಿದೆ ಎಂದು ಹೇಳಿದ್ದಾರೆ. ‘ಇದು ಈ ಟೂರ್ನಿಯ ಸಾಮಾನ್ಯ ಅನುಭವ, ಬಹಳಷ್ಟು ಪ್ರಯಾಣಿಸಬೇಕಾಯಿತು.’ ಇದೆಲ್ಲವೂ ಸವಾಲಿನ ಭಾಗ. ನಾವು ಇಲ್ಲಿನ ಪ್ರತಿಯೊಂದು ಸ್ಥಳಕ್ಕೂ ಪ್ರಯಾಣಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.




