ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿರುವ ವೇಳೆ, ಭಾರತದ ಪ್ರಜೆಗಳು ಮೋದಿ ಸರ್ಕಾರದ ಎದುರು ಹಲವು ಬೇಡಿಕೆ ಇಡುತ್ತಿದ್ದಾರೆ.
ಈ ಸಮಯದಲ್ಲೇ ಸ್ಫೋಟಕ ಸಮೀಕ್ಷೆಯೊಂದು ಮೋದಿ ಸರ್ಕಾರದ ವಿರುದ್ಧ ಭಾರತೀಯರಲ್ಲಿ ಮೂಡಿರುವ ಅಸಮಾಧಾನದ ಬಗ್ಗೆ ಮಾಹಿತಿ ಹೊರ ಹಾಕಿದೆ.
ಬಜೆಟ್ ಪೂರ್ವ ಸಮೀಕ್ಷೆ ನಡೆಸಿರುವ ಸಿ-ವೋಟರ್ ಸಂಸ್ಥೆ, ಭಾರತೀಯರಲ್ಲಿ ಮೋದಿ ಅವರ ಸರ್ಕಾರದ ಕಾರ್ಯವೈಖರಿ ಬಗ್ಗೆ ಬೇಸರ ಮೂಡಿರುವ ಬಗ್ಗೆ ಮಾಹಿತಿ ನೀಡಿದೆ .
ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಹೆಚ್ಚದ ಸಂಬಳ, ದುಬಾರಿ ಜೀವನದಿಂದ ಭವಿಷ್ಯದ ಮೇಲೆ ಬಹುತೇಕ ಭಾರತೀಯರು ಭರವಸೆಯನ್ನೇ ಕಳೆದುಕೊಂಡು ಭ್ರಮನಿರಸನಗೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಇಷ್ಟೇ ಅಲ್ಲ ಮುಂದಿನ ಆರ್ಥಿಕ ವರ್ಷದಲ್ಲಿ ಸಾಮಾನ್ಯ ಜನರ ಜೀವನ ಮತ್ತಷ್ಟು ಹದಗೆಡಲಿದೆ ಎಂದು ಶೇಕಡಾ 37ಕ್ಕೂ ಹೆಚ್ಚು ಪ್ರಜೆಗಳು ಪ್ರತಿಕ್ರಿಯೆ ನೀಡಿದ್ದಾರೆ. 2013ರ ನಂತರ ಈ ರೀತಿಯ ಬೇಸರ ಹೆಚ್ಚಾಗುತ್ತಿದೆ ಎಂಬುದಾಗಿಯೂ ಸಿ-ವೋಟರ್ ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯನ್ನು ದೇಶದ ವಿವಿಧೆಡೆ ನಡೆಸಲಾಗಿದ್ದು, ಸುಮಾರು 5,269 ಜನರು ಪಾಲ್ಗೊಂಡಿದ್ದರು. ಆಹಾರದ ಬೆಲೆ ಗಗನಕ್ಕೇರಿರುವುದು ಪ್ರತಿ ಮನೆ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಹೀಗಾಗಿ ಭಾರತದ ಆರ್ಥಿಕತೆ ಪ್ರಗತಿ ಮಂದಗತಿಯಲ್ಲಿ ಸಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.