ತುರುವೇಕೆರೆ : ಪಟ್ಟಣದ ಮಿನಿವಿಧಾನಸೌಧದ ಹಿಂಭಾಗ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು, ಸೆಪ್ಟಂಬರ್ 09 ರಂದು ಬೆಳಿಗ್ಗೆ 10.30 ಕ್ಕೆ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಯಾಗಲಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ತುರುವೇಕೆರೆಯಲ್ಲಿ ಮಾತ್ರ ಉದ್ಘಾಟನೆಯಾಗಿಲ್ಲ ಎಂಬ ಬಗ್ಗೆ ಭಾರತ ವೈಭವ ದಿನಪತ್ರಿಕೆ ಆಗಸ್ಟ್ 30 ರಂದು ಡಾ.ಜಿ.ಪರಮೇಶ್ವರ್ ಡೇಟ್ ಕೊಟ್ರೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ..? ಎಂಬ ಶೀರ್ಷಿಕೆಯಡಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ವಿಳಂಬಕ್ಕೆ ಸಚಿವರು ದಿನಾಂಕ ನೀಡಿಲ್ಲ ಎಂಬ ಪಪಂ ಮುಖ್ಯಾಧಿಕಾರಿಗಳ ಹೇಳಿಕೆನ್ನಾಧರಿಸಿ ವಿಸೃತ ವರದಿ ಮಾಡಿತ್ತು. ಈ ವರದಿಗೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಶೀಘ್ರ ಸ್ಪಂದಿಸಿದ್ದು, ದಿನಾಂಕ ನಿಗದಿಪಡಿಸಿದ್ದಾರೆ. ಇದು ಪತ್ರಿಕೆಯ ವರದಿಗೆ ಹಾಗೂ ಪತ್ರಿಕೋದ್ಯಮಕ್ಕೆ ಸಂದ ಜಯವಾಗಿದೆ.
ಬಡವರು, ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರು ಹಸಿವಿನಿಂದ ಬಳಲಬಾರದೆನ್ನುವ ಉದ್ದೇಶವನ್ನಿಟ್ಟುಕೊಂಡು ಅತಿ ಕಡಿಮೆ ದರದಲ್ಲಿ ತಿಂಡಿ, ಊಟ ಕೊಡುವ ಯೋಜನೆಯನ್ನು ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್ ಅನ್ನು 2014 ರಲ್ಲಿ ಸಿದ್ದರಾಮಯ್ಯನವರು ಘೋಷಿಸಿ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ ರಾಜ್ಯದ ಬಹುತೇಕ ಕಡೆ ಇಂದಿರಾ ಕ್ಯಾಂಟೀನ್ ಪ್ರಾರಂಭಗೊಂಡರೂ ತುರುವೇಕೆರೆಯಲ್ಲಿ ಮಾತ್ರ ಸ್ಥಳಾವಕಾಶ, ಜಾಗದ ಸಮಸ್ಯೆ ಹಾಗೂ ತಾಂತ್ರಿಕ ಕಾರಣಗಳ ಕಾರಣದಿಂದ ಸರ್ಕಾರದ ಅವಧಿ ಮುಗಿದರೂ ಆಗಲೇ ಇಲ್ಲ. ನಂತರದ ಸರ್ಕಾರಗಳು ಇಂದಿರಾ ಕ್ಯಾಂಟೀನ್ ಬಗ್ಗೆ ಆಸಕ್ತಿ ವಹಿಸಿರಲಿಲ್ಲ.
ಈಗ 2023 ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು, ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಯಾದರು. ಎಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿಲ್ಲವೋ ಅಲ್ಲಿ ಶೀಘ್ರ ಸ್ಥಳ ಗುರುತಿಸಿ ಪ್ರಾರಂಭಿಸಬೇಕೆಂದು ಆದೇಶಿಸಿದ್ದ ಹಿನ್ನೆಲೆಯಲ್ಲಿ ಪಟ್ಟಣದ ೩-೪ ಕಡೆ ಕ್ಯಾಂಟೀನ್ ಪ್ರಾರಂಭಕ್ಕೆ ಸ್ಥಳ ಗುರುತಿಸಲಾಗಿತ್ತು. ಆದರೆ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ನಿಗದಿಪಡಿಸಿದಷ್ಟೇ ಸ್ಥಳ ಬೇಕಿದ್ದ ಕಾರಣ ತಹಸೀಲ್ದಾರ್ ಅವರು ತಾಲ್ಲೂಕು ಕಛೇರಿ ಹಿಂಭಾಗ ಸ್ಥಳ ನೀಡಿದ್ದು, ಕಟ್ಟಡ ನಿರ್ಮಾಣವಾಗಿದೆ. ಅಲ್ಲದೆ ಆಹಾರ ತಯಾರಿಕೆಗೆ ಬೇಕಾದ ಪಾತ್ರಾ ಸಾಮಾನುಗಳು, ಅಗತ್ಯ ಸೌಲಭ್ಯಗಳು ಸಿದ್ದವಾಗಿದ್ದು ಉದ್ಘಾಟನೆ ಮಾತ್ರ ಆಗಬೇಕಿದೆ. ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾದರೆ ಬೆಳಿಗ್ಗೆ 5 ರೂಗಳಿಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ 10 ರೂಗಳಿಗೆ ಊಟ ದೊರೆಯಲಿದೆ.
ಒಟ್ಟಾರೆ ಬಡವರು, ಕೂಲಿಕಾರ್ಮಿಕರು, ವ್ಯಾಪಾರಸ್ಥರಿಗೆ ಕಡಿಮೆ ದರದಲ್ಲಿ ತಿಂಡಿ, ಊಟ ನೀಡುವ ಇಂದಿರಾ ಕ್ಯಾಂಟೀನ್ ಭಾಗ್ಯ ತುರುವೇಕೆರೆಯಲ್ಲೂ ಪ್ರಾರಂಭವಾಗಲು ಕಾರಣವಾದ ಭಾರತ ವೈಭವ ಪತ್ರಿಕೆ ವರದಿಗೆ ನಾಗರೀಕರು ಧನ್ಯವಾದ ಅರ್ಪಿಸಿದ್ದಾರೆ. ಪತ್ರಿಕಾ ವರದಿಗೆ ಶೀಘ್ರ ಸ್ಪಂದಿಸಿ ದಿನಾಂಕ ನಿಗದಿಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಶಾಸಕ ಎಂ.ಟಿ.ಕೃಷ್ಣಪ್ಪ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯ್ತಿಗೆ ಪತ್ರಿಕೆ ಆಭಾರಿಯಾಗಿದೆ.
ವರದಿ : ಗಿರೀಶ್ ಕೆ ಭಟ್




