ಸುದ್ದಿಗೋಷ್ಠಿಯಲ್ಲಿ ಮುಖ್ಯಾಧಿಕಾರಿ ಶಿವಾನಂದ ಭೋಸಲೆಯವರಿಂದ ಮಾಹಿತಿ
————————–ಸದಲಗಾ ಪಟ್ಟಣದಲ್ಲಿ ನಿರ್ಮಾಣದಲ್ಲಿರುವ ಕಾಮಗಾರಿ
ನಿಪಾಣಿ: ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಶಾಸಕ ಗಣೇಶ ಹುಕ್ಕೇರಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಯವರ ವಿಶೇಷ ಪ್ರಯತ್ನದಿಂದ 85 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕರ್ನಾಟಕದ ಬಡವರಿಗೆ ಅತಿ ಕಡಿಮೆ ದರದಲ್ಲಿ ಊಟ ಉಪಹಾರ ನೀಡುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಕೊನೆ ಹಂತದಲ್ಲಿದ್ದು ಅತಿ ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ ಎಂದು ಮುಖ್ಯಾಧಿಕಾರಿ ಶಿವಾನಂದ ಭೋಸಲೆ ತಿಳಿಸಿದರು.
ಸದಲಗಾ ಪಟ್ಟಣದ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ಇಂದಿರಾ ಕ್ಯಾಂಟೀನ್ ಕಾಮಗಾರಿ ಕುರಿತು ಅಧಿಕ ಮಾಹಿತಿ ನೀಡಿದರು. ಈಗಾಗಲೇ ಇಂದಿರಾ ಕ್ಯಾಂಟೀನ್ ಕಟ್ಟಡ ಪೂರ್ಣಗೊಂಡಿದ್ದು ಉಪಹಾರ ಗ್ರಹದಲ್ಲಿಯ ಇನ್ನುಳಿದ ಮೂಲಭೂತ ಸೌಲಭ್ಯಗಳ ಕಾಮಗಾರಿ ನಡೆಯುತ್ತಿದೆ.
ಕುಳಿತುಕೊಳ್ಳುವ ಆಸನಗಳು, ಅಡುಗೆಮನೆ,ಸ್ವಾಗತ ಕೋಣೆ, ವಿದ್ಯುತ್ ಜೋಡಣೆ,ಅಡುಗೆ ಅನಿಲ ಜೋಡಣೆ, ನೀರು ಪೂರೈಕೆ ವ್ಯವಸ್ಥೆಗಳ ಕಾರ್ಯ ಭರದಿಂದ ನಡೆಯುತ್ತಿದ್ದು ಸದರಿ ಸರ್ಕಾರಿ ಯೋಜನೆಯಿಂದಾಗಿ ಸದಲಗಾ ಪಟ್ಟಣ ಸೇರಿದಂತೆ ಒಡಗೋಲ್ ಬೈನಾಕವಾಡಿ ಜನವಾಡ ಶಮನೆವಾಡಿ, ಮಲಿಕವಾಡ ನೇಜ ಸೇರಿದಂತೆ 15ಕ್ಕು ಅಧಿಕ ಗಡಿ ಭಾಗದ ಹಳ್ಳಿಗಳ ಬಡಜನತೆಗೆ ಅತಿ ಕಡಿಮೆ ದರದಲ್ಲಿ ಅಂದರೆ 5 ರೂಪಾಯಿಗೆ ಉಪಹಾರ ಹಾಗೂ 10 ರೂಪಾಯಿಗೆ ಊಟ ವ್ಯವಸ್ಥೆ ಮಾಡಲಾಗಿದೆ.
ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಇನ್ನುಳಿದ ಕಾಮಗಾರಿಗಳು ಪೂರ್ಣತ್ವದ ಹಂತದಲ್ಲಿದ್ದು ಅತಿ ಶೀಘ್ರದಲ್ಲಿ ಸರ್ವ ಸಾಮಾನ್ಯರ ಸೇವೆಗಾಗಿ ಅತ್ಯಂತ ಸುಸಜ್ಜಿತ ಮೂಲ ಸೌಲಭ್ಯಗಳೊಂದಿಗೆ ಲೋಕಾರ್ಪನೆಗೆ ಸಜ್ಜಾಗುತ್ತಿದೆ. ಇದು ಅಲ್ಲದೆ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ಏಕವಿರಿ ಕೆರೆ ಹೂಳೆತ್ತಲು ಅಮೃತ್ 2 ಯೋಜನೆ ಅಡಿ ಒಂದು ಕೋಟಿ ರೂಪಾಯಿಗಳು ಮಂಜೂರಾಗಿದ್ದು ಸದರಿ ಕಾಮಗಾರಿಗೂ ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ.
ಸರ್ಕಾರ ಕೇವಲ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿದ್ದರೂ ಪುರಸಭೆ ವತಿಯಿಂದ ಈಗಾಗಲೇ ಕಾಂಪೌಂಡ್ ನೆಲಹಾಸು ಕಾಮಗಾರಿಯನ್ನು ಪೂರ್ಣಗೊಳಿಸಿದೆ.ಇದೂ ಅಲ್ಲದೆ ಇಂದಿರಾಕ್ಯಾಂಟೀನ್ ಪ್ರವೇಶ ದ್ವಾರದಲ್ಲಿ ಕೂಡ್ರಿಸಲಾದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬೇರೆ ಕಡೆ ಕೂಡ್ರಿಸಿ ಸುಸಜ್ಜಿತ ಕ್ಯಾಂಟೀನ್ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಚಿಕ್ಕೋಡಿಯ ನಂತರ ಗ್ರಾಮೀಣ ಪ್ರದೇಶದಲ್ಲಿಯ ಸಾಮಾನ್ಯ ಜನತೆಗೆ 10 ರೂಪಾಯಿಗಳಲ್ಲಿ ಹೊಟ್ಟೆ ತುಂಬ ಊಟ ನೀಡುವ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಭೋಸಲೆ ತಿಳಿಸಿದರು. ಈ ಸಂದರ್ಭದಲ್ಲಿ ಕೃಷ್ಣಾ ಬಾಗಡೇ ಅಣ್ಣಾಸಾಹೇಬ ಕದಂ, ಮಕರಂದ ದ್ರವಿಡ ಹಾಗೂ ಕೈಲಾಸ ಮಾಳಗೆ ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚನೆ




