ನವದೆಹಲಿ : ಪಾಕ್ ಪೋಷಿತ ಉಗ್ರರು ಪಹಲ್ಗಾಮ್ ನಲ್ಲಿ ದಾಳಿ ನಡೆಸಿದಕ್ಕೆ ಪ್ರತ್ಯುತ್ತರವಾಗಿ ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ರಾಜತಾಂತ್ರಿಕವಾಗಿ ಮೊದಲು ಪೆಟ್ಟುಕೊಟ್ಟಿದ್ದು ಗೊತ್ತೇ ಇದೆ.
ನಂತರ ಭಾರತದ ಸಶಸ್ತ್ರ ಪಡೆಗಳು ಪಾಕ್ಗೆ ನುಗ್ಗಿ ನೀಡಿದ ಪ್ರತ್ಯುತ್ತರಕ್ಕೆ ಬೆವರಿದ ಪಾಕ್ ಅಂಗಲಾಚಿ ಕದನ ವಿರಾಮಕ್ಕೆ ಮಂಡಿಯೂರಿತು. ಇದೀಗ ಸಿಂಧೂ ನದಿ ನೀರು ಹರಿಸಿ ಎಂದು ಭಾರತಕ್ಕೆ ಪತ್ರ ಬರೆಯುವ ಮೂಲಕ ಪಾಕಿಸ್ತಾನ ಮನವಿ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, ಭಯೋತ್ಪಾದನೆಯನ್ನು ಕೊನೆಗೊಳಿಸುವವರೆಗೆ ನಾವು ಅಮಾನತಿನಲ್ಲಿರುವ ಒಪ್ಪಂದವನ್ನು ಹಾಗೆಯೇ ಮುಂದುವರಿಸುತ್ತೇವೆ. ಸಿಂಧೂ ನದಿ ಒಪ್ಪಂದವನ್ನು ತಡೆಹಿಡಿಯಲಾಗಿದೆ ಎಂದು ಪಾಕ್ ಪುನರ್ವಿಮರ್ಶೆ ಕೋರಿದಕ್ಕೆ ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸುವ ನಿರ್ಧಾರವನ್ನು ಮರುಪರಿಶೀಲನೆ ಮಾಡಲ್ಲ. ಇಸ್ಲಾಮಾಬಾದ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕೊನೆಗೊಳಿಸಿ. ಅಲ್ಲಿಯವರೆಗೂ ರದ್ದಾಗಿರುವಂತೆ ಒಪ್ಪಂದ ಮುಂದುವರಿಯಲಿದೆ ಎಂದು ಒತ್ತಿ ಹೇಳಿದ್ದಾರೆ.
ಕಾಶ್ಮೀರದ ಬಗ್ಗೆ ಭಾರತ ನಡೆಸಲು ಸಿದ್ಧವಿರುವ ಏಕೈಕ ಮಾತುಕತೆ ಎಂದರೆ ಅದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ತೆರವುಗೊಳಿಸುವ ಚರ್ಚೆ ಮಾತ್ರ ಎಂದು ಹೇಳಿದ್ದಾರೆ. ಪಾಕಿಸ್ತಾನದ ಜಲಸಂಪನ್ಮೂಲ ಸಚಿವಾಲಯವು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿರುವುದಕ್ಕೆ ಜೈಶಂಕರ್ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.
1960ರಲ್ಲಿ ಸಹಿ ಹಾಕಲಾದ ಮತ್ತು ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ್ದ ಸಿಂಧೂ ನದಿ ನೀರು ಹಂಚಿಕೆಯ ಈ ಒಪ್ಪಂದವು ಭಾರತ ಮತ್ತು ಪಾಕಿಸ್ತಾನದ ನಡುವಿನ ನೀರು ಹಂಚಿಕೆಯನ್ನು ನಿಯಂತ್ರಿಸುತ್ತದೆ.
ಇದು ಪೂರ್ವದ ನದಿಗಳಾದ ಸಟ್ಲೆಜ್, ಬಿಯಾಸ್ ಮತ್ತು ರಾವಿ ನದಿಗಳನ್ನು ಭಾರತಕ್ಕೆ ಹಂಚಿಕೆ ಮಾಡುತ್ತದೆ. ಆದರೆ ಪಶ್ಚಿಮದ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್ ಪಾಕಿಸ್ತಾನಕ್ಕೆ ಹೋಗುತ್ತವೆ.
ಏ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ ನಂತರ ಭಾರತ ಈ ಒಪ್ಪಂದವನ್ನು ಅಮಾನತುಗೊಳಿಸಿತ್ತು.
ಇನ್ನು ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡುವಾಗಲೂ ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಭಾರತದ ದೃಢ ನಿಲುವನ್ನು ಪುನರುಚ್ಚರಿಸಿದ್ದರು.