ಬೆಂಗಳೂರು : ಓಲಾ, ಉಬರ್ ಆಯಪ್ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಆಂಬ್ಯುಲೆನ್ಸ್ ಸೇವಾ ಗ್ರಾಹಕರಿಗೂ ನೀಡಬೇಕಿದೆ.
ಈ ನಿಟ್ಟಿನಲ್ಲಿ ಪಾರದರ್ಶಕ ಆಯ್ಕೆ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಜೊತೆಗೆ ಖಾಸಗಿ ಸಂಸ್ಥೆ ಮೂಲಕ ನಡೆಸುತ್ತಿರುವ 108 ಆರೋಗ್ಯ ಸೇವೆಯನ್ನು ಕೂಡ ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲಾಗುವುದು.
ಮುಂದೆ ಈ ವಾಹನಗಳು ಡಿಸಿ, ಸಿಇಒ, ಡಿಎಚ್‌ಒ ಕಂಟ್ರೋಲ್ನಲ್ಲಿ ಇರಲಿವೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ.
ಮುಂದಿನ ಅಧಿವೇಶನದಲ್ಲಿ ಈ ಕುರಿತಾದ ಮಸೂದೆ ಮಂಡಿಸಲಾಗುವುದು. ಆಯಪ್ ನಲ್ಲಿಯೇ ಆಂಬುಲೆನ್ಸ್ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗುವುದು.
ರಾಜ್ಯದಲ್ಲಿ ಅನೇಕ ಕಂಪನಿಗಳು ಆಂಬುಲೆನ್ಸ್ ಸೇವೆ ಒದಗಿಸುತ್ತಿದ್ದು, ಅವುಗಳ ಬಗ್ಗೆ ಸಾಕಷ್ಟು ದೂರುಗಳಿವೆ. ಹೀಗಾಗಿ ಆಂಬುಲೆನ್ಸ್ ಗಳಲ್ಲಿ ಯಾವ ವ್ಯವಸ್ಥೆ ಇರಬೇಕು. ದರ ಎಷ್ಟಿರಬೇಕು ಎಂಬುದನ್ನು ಸರ್ಕಾರದಿಂದ ಕಾಯ್ದೆ ರೂಪಿಸಲಾಗುವುದು.
ಶಾಸನ ಜಾರಿಯಾದ ನಂತರ ಆಂಬುಲೆನ್ಸ್ ಸೇವೆ ಒದಗಿಸುವವರು ಖಾಸಗಿ ಆಸ್ಪತ್ರೆಗಳ ರೀತಿ ನೋಂದಣಿ ಮಾಡಿಕೊಳ್ಳಬೇಕು. ಆಂಬುಲೆನ್ಸ್ ಗಳಿಗೆ ಸೇವೆಯ ಆಧಾರದಲ್ಲಿ ಸರ್ಕಾರವೇ ದರ ನಿಗದಿ ಮಾಡಲಿದೆ. ಆಯಪ್ ನಲ್ಲಿ ಬುಕ್ ಮಾಡಬೇಕಿದೆ.




