ತುರುವೇಕೆರೆ:- ಪಟ್ಟಣವನ್ನು ಸ್ವಚ್ಚಗೊಳಿಸಿ ನಾಗರೀಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ನೇತ್ರಾಸಿದ್ದಲಿಂಗಸ್ವಾಮಿ ತಿಳಿಸಿದರು.
ಪಟ್ಟಣದ ಚೌದ್ರಿ ಕನ್ವೆನ್ಶನ್ ಹಾಲ್ ನಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದಿಂದ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ ಹಣೆಗೆ ಕುಂಕುಮ ಇಟ್ಟು, ಆರತಿ ಬೆಳಗಿ, ರಕ್ಷಾಬಂಧನ ಕಟ್ಟುವ ಮೂಲಕ ಬ್ರಾತೃತ್ವ ಭಾವ ಮೆರೆದು ಅರ್ಥಪೂರ್ಣವಾಗಿ ರಕ್ಷಾಬಂಧನ ಹಬ್ಬ ಆಚರಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ಮಳೆ, ಚಳಿ, ಬಿಸಿಲೆನ್ನದೆ ಪಟ್ಟಣದ ಪ್ರತಿ ರಸ್ತೆ, ಚರಂಡಿಯನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ಕೊರೊನಾ ಸಮಯದಲ್ಲಿ ಜನರು ಜೀವಭಯದಿಂದ ತತ್ತರಿಸುವಾಗಲೂ ಪೌರಕಾರ್ಮಿಕರು ಕೊರೊನಾ ವಾರಿಯರ್ ಗಳಾಗಿ ತಮ್ಮ ಜೀವದ ಹಂಗನ್ನು ತೊರೆದು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ನಾವು ಚೆನ್ನಾಗಿರಲಿ ಎಂದು ಬಯಸುವ ಪೌರಕಾರ್ಮಿಕರಿಗೆ ರಕ್ಷಾಬಂಧನ ಕಟ್ಟಿ ಅವರ ಆರೋಗ್ಯವೂ ಚೆನ್ನಾಗಿರಲಿ ಎಂಬ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಇದೇ ವೇಳೆ ಸುಮಾರು ೩೦ಕ್ಕೂ ಅಧಿಕ ಮಂದಿ ಪೌರಕಾರ್ಮಿಕರಿಗೆ ರಕ್ಷಾಬಂಧನ ಕಟ್ಟುವುದರ ಜೊತೆಗೆ ಸಿಹಿ ನೀಡಿ ಉಚಿತವಾಗಿ ಜರ್ಕಿನ್ ವಿತರಿಸಲಾಯಿತು. ಪಪಂ ಸದಸ್ಯರಾದ ಆಶಾರಾಜಶೇಖರ್, ಆರ್.ಮಧು, ವೈದ್ಯರಾದ ಡಾ.ಚೌದ್ರಿ ನಾಗೇಶ್, ರೋಟರಿ ಅಧ್ಯಕ್ಷ ದೇವರಾಜ್, ಇನ್ನರ್ ವೀಲ್ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಕಾರ್ಯದರ್ಶಿ ಆನಂದಜಲ ಸೇರಿದಂತೆ ಪದಾಧಿಕಾರಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್