————————————————————ಬೆಳಗಾವಿಯಲ್ಲಿ ಮಾದಿಗ ಸಂಘದ ಹೋರಾಟ
ಬೆಳಗಾವಿ: ಅನುಷ್ಠಾನ ಗೊಂಡಿಲ್ಲದ ಹೊರಾಟ -ಒಳ ಮೀಸಲಾತಿ ಬೇಡಿಕೆ ಮತ್ತೆ ಬೆಳಗಾವಿಯಲ್ಲಿ ತೀವ್ರಗೊಂಡಿದೆ. ಮಾದಿಗ ಸಮುದಾಯದ ಸದಸ್ಯರು ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಬಲ ಪ್ರತಿಭಟನೆ ನಡೆಸಿ, ಸರ್ಕಾರ ತಕ್ಷಣ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು, ಮಹಿಳೆಯರು, ಕಾರ್ಮಿಕರು ಸೇರಿ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಸರ್ಕಾರದ ನಿರ್ಲಕ್ಷ್ಯದಿಂದ ಸಮುದಾಯವು ಅನ್ಯಾಯಕ್ಕೆ ಒಳಗಾಗಿದೆ ಎಂದು ಆರೋಪಿಸಿದರು. ಪ್ರತಿಭಟಕರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉದ್ದೇಶಿಸಿದ ಮನವಿಯನ್ನು ಜಿಲ್ಲಾ ಅಧಿಕಾರಿಗಳ ಮೂಲಕ ಸಲ್ಲಿಸಲಾಯಿತು.
ಸಂಘದ ನಾಯಕ ಉದಯ ರೆಡ್ಡಿ ಅವರು, ಒಳ ಮೀಸಲಾತಿ ಕುರಿತು ವಿಶೇಷ ಅಧಿವೇಶನವನ್ನು ಆಗಸ್ಟ್ 16ರಂದು ನಡೆಸಬೇಕಿತ್ತು ಆದರೆ ಅದನ್ನು ಈಗ ಆಗಸ್ಟ್ 19ಕ್ಕೆ ಮುಂದೂಡಲಾಗಿದೆ ಎಂದು ನೆನಪಿಸಿದರು. “ಪ್ರತಿ ಮುಂದೂಡಿಕೆ ಸಮುದಾಯದ ಕೋಪವನ್ನು ಹೆಚ್ಚಿಸುತ್ತಿದೆ. ಶಾಂತ ಜನರ ಮೇಲೆ ಅನ್ಯಾಯ ಮಾಡಿದರೆ ಸರ್ಕಾರವೇ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ,” ಎಂದು ಎಚ್ಚರಿಕೆ ನೀಡಿದರು. ತಮ್ಮ ಭಾಷಣದಲ್ಲಿ ಅವರು ಒಳ ಮೀಸಲಾತಿ ಜಾರಿಯಾಗದಿದ್ದರೆ ರಕ್ತ ಕ್ರಾಂತಿ ಕೂಡ ಅಸಾಧ್ಯವಲ್ಲ” ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಪ್ರತಿಭಟಕರು ಸರ್ಕಾರ ನಿಗದಿಪಡಿಸಿದ ಅವಧಿಯೊಳಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ದಲಿತ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು ಮತ್ತು ಮಹಿಳೆಯರು ಒಗ್ಗೂಡಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಘೋಷಿಸಿದರು.
ಈ ಪ್ರತಿಭಟನೆಯಲ್ಲಿ ಮುಖಂಡರಾದ ಉದಯ ಎಸ್ ರೆಡ್ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಎಂ ಆರ್ ಹೆಚ್.ಎಸ್) ಶ್ರೀಕಾಂತ್ ಮಾದರ್ , ಪರಶುರಾಮ ವಂಟಮುರಿ, ಬಸವರಾಜ್ ದೊಡ್ಡಮನಿ , ಯಮನಪ್ಪ ರತ್ನಾಕರ, ಬಿಷ್ಟಪ್ಪ ಮಾದರ್ , ವಿಷ್ಣು ಎಸ್. ಇಂಗಳಿ , ಅರವಿಂದ್ ಕೋಲಕರ, ಫಕೀರಪ್ಪ ಹರಿಜನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಬೆಳಗಾವಿಯ ಈ ಪ್ರತಿಭಟನೆ ರಾಜ್ಯದಾದ್ಯಂತ ನಡೆಯುತ್ತಿರುವ ಮಾದಿಗ ಸಮುದಾಯದ ದೊಡ್ಡ ಮಟ್ಟದ ಹೋರಾಟದ ಭಾಗವಾಗಿದ್ದು, “-ಒಳ ಮೀಸಲಾತಿ ನಮ್ಮ ಸಂವಿಧಾನಿಕ ಹಕ್ಕು, ಇದು ಕೇವಲ ರಾಜಕೀಯ ಭರವಸೆ ಅಲ್ಲ” ಎಂಬ ಸಮುದಾಯದ ನಿಲುವನ್ನು ಮತ್ತೊಮ್ಮೆ ಹೈಲೈಟ್ ಮಾಡಿತು.
ವರದಿ: ರಾಜು ಮುಂಡೆ




