ರಾಮದುರ್ಗ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾನ್ಯ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಸಂಘಟನೆಯ ವತಿಯಿಂದ ರಾಮದುರ್ಗ ತಾಲ್ಲೂಕಿನ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯದ ಜನರು ಕಳೆದ ಹಲವಾರು ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ನಮ್ಮ ಸಂಘಟನೆಯ ಪದಾಧಿಕಾರಿಗಳು ವಿವಿಧ ಎಸ್ಸಿ/ಎಸ್ಪಿ ಕೇರಿಗಳಿಗೆ ಭೇಟಿ ನೀಡಿದಾಗ, ರಸ್ತೆ, ಚರಂಡಿ, ಶೌಚಾಲಯಗಳ ಕೊರತೆ ಮತ್ತು ಅತಿದೊಡ್ಡ ಸಮಸ್ಯೆಯಾದ ಸ್ಮಶಾನದ ಕೊರತೆ ಬಗ್ಗೆ ಸಮುದಾಯದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಸಮಸ್ಯೆಗಳ ನಿವಾರಣೆಗೆ ಹಿಂದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಪಡಿತರ ಅಂಗಡಿಗಳ ಹಂಚಿಕೆ, ಹೊಸ ವಸತಿ ಯೋಜನೆಗಳ ಜಾರಿ (ಐದು-ಆರು ಮಕ್ಕಳ ಕುಟುಂಬಗಳು ಜಾಗದ ಕೊರತೆಯಿಂದ ವಂಚಿತರಾಗಿರುವುದು), ಮತ್ತು ಸರ್ಕಾರಿ ಅನುದಾನದಲ್ಲಿನ ಕಾಮಗಾರಿಗಳ ತೀವ್ರ ಕಳಪೆ ಮಟ್ಟದ ಬಗ್ಗೆಯೂ ಗಂಭೀರ ದೂರುಗಳಿವೆ. ಎನ್ ಆರ್‌ಇಜಿ (NREG), ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ, ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಗಳಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿರುವ ಬಗ್ಗೆ ದಾಖಲಾತಿಗಳನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದರು.
ಪ್ರಮುಖ ಬೇಡಿಕೆಗಳು
ಸ್ಮಶಾನ ಮತ್ತು ಭೂಮಿ: ರಾಮದುರ್ಗ ತಾಲ್ಲೂಕಿನ ಬಹುತೇಕ (ಶೇ. 90ರಷ್ಟು) ಪರಿಶಿಷ್ಟ ಜಾತಿ/ಪಂಗಡ ಸಮುದಾಯದವರಿಗೆ ಸ್ಮಶಾನ ಭೂಮಿ ಇಲ್ಲ. ಅಲ್ಲದೆ, ಅನೇಕ ದಲಿತರಿಗೆ ಉಳುಮೆ ಮಾಡಲು ಭೂಮಿ (ಹೂಲಗಳು) ಸಹ ಇರುವುದಿಲ್ಲ. ಸ್ಮಶಾನಕ್ಕೆ ಕಡ್ಡಾಯವಾಗಿ ರಸ್ತೆ, ವಿದ್ಯುತ್ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು.
ವಸತಿ ಸಮಸ್ಯೆ: ಸ್ವಾತಂತ್ರ್ಯ ಬಂದು 78 ವರ್ಷಗಳ ನಂತರವೂ ಮಾದಿಗ ಸಮುದಾಯದ ಅನೇಕ ಕೇರಿಗಳಲ್ಲಿ ಒಂದೇ ಮನೆಯಲ್ಲಿ 5-6 ಸಹೋದರರ ಕುಟುಂಬಗಳು ವಾಸಿಸುತ್ತಿದ್ದು, ಅವರಿಗೆ ವಾಸಿಸಲು ಖುಲ್ಲಾ ಜಾಗಾ ಇಲ್ಲದ ಕಾರಣ ಹೊಸ ವಸತಿ ಯೋಜನೆಗಳು ಸಿಗುತ್ತಿಲ್ಲ. ನಿಯಮವನ್ನು ಸಡಿಲಗೊಳಿಸಿ ವಸತಿ ಮಂಜೂರಾತಿ ನೀಡಬೇಕು.
ಸಾರ್ವಜನಿಕ ಶೌಚಾಲಯ: ಹಲವು ಹಳ್ಳಿಗಳಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣ ಶೌಚಾಲಯಗಳನ್ನು ನಿರ್ಮಿಸಬೇಕು.
ಕಾಮಗಾರಿಗಳ ಗುಣಮಟ್ಟದ ತನಿಖೆ: ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ನಡೆದಿರುವ ಎಲ್ಲಾ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ. ಇವುಗಳ ಬಗ್ಗೆ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು.
ಭ್ರಷ್ಟಾಚಾರದ ಬಗ್ಗೆ ಕ್ರಮ: ಎನ್‌ಆರ್‌ಇಜಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯಡಿಯಲ್ಲಿ ನಡೆದಿರುವ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಕುರಿತು ನಾವು ದಾಖಲಾತಿಗಳನ್ನು ಒದಗಿಸುತ್ತೇವೆ. ಕೂಡಲೇ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಎಸ್ಸಿ/ಎಸ್ಟಿ ಅನುದಾನ ದುರ್ಬಳಕೆ: ಗ್ರಾಮ ಪಂಚಾಯತಿಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಇತರ ಕಾಮಗಾರಿಗಳಿಗೆ ಬಳಸಲಾಗುತ್ತಿದ್ದು, ಇದು ದಲಿತ ಕೇರಿಗಳ ಅಭಿವೃದ್ಧಿಗೆ ಅಡ್ಡಿಯಾಗಿದೆ. ಇದರ ಬಗ್ಗೆ ಕಠಿಣ ಕ್ರಮ ಜರುಗಿಸಬೇಕು.
ಪಡಿತರ ಅಂಗಡಿಗಳ ಹಂಚಿಕೆ: ರಾಮದುರ್ಗ ಭಾಗದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನರಿಗೆ ಎಷ್ಟು ಪಡಿತರ (ರೇಷನ್) ಅಂಗಡಿಗಳನ್ನು ಮಂಜೂರು ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ಒದಗಿಸಬೇಕು ಮತ್ತು ಈ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು.
ನ್ಯಾಯಬೆಲೆ ಅಂಗಡಿಗಳ ನಿರ್ವಹಣೆ: ಹಲವು ನ್ಯಾಯಬೆಲೆ ಅಂಗಡಿಗಳು ನಿಗದಿತ ಸಮಯಕ್ಕೆ ತೆರೆಯುವುದಿಲ್ಲ. ಫಲಾನುಭವಿಗಳು ತಮ್ಮ ಕೆಲಸ ಬಿಟ್ಟು ಹಲವಾರು ದಿನ ಅಕ್ಕಿಗಾಗಿ ಕಾಯುವ ಪರಿಸ್ಥಿತಿ ಇದೆ. ನ್ಯಾಯಬೆಲೆ ಅಂಗಡಿಗಳನ್ನು ಪ್ರತಿದಿನ ಚಾಲ್ತಿಯಲ್ಲಿಡಲು ನಿರ್ದೇಶನ ನೀಡಬೇಕು.
ಅಟಲ್ ಜೀ ಕೇಂದ್ರಗಳ ಸಮಸ್ಯೆ: ಹೋಬಳಿ ಕೇಂದ್ರಗಳಲ್ಲಿರುವ ಅಟಲ್ ಜೀ ಕೇಂದ್ರಗಳಲ್ಲಿ ವಾರಸಾ ಪ್ರಮಾಣ ಪತ್ರ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ಅಧಿಕಾರಿಗಳು ಸಹಿಗೆ ಲಂಚ ಕೇಳುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ಮೇಲೆ ಕಾನೂನಾತ್ಮಕ ಶಿಕ್ಷೆಗೆ ಒಳಪಡಿಸಬೇಕು.
ವಸತಿ ಯೋಜನೆಯ ಬಿಲ್‌ಗಳ ವಿಳಂಬ: ಮಂಜೂರಾದ ಅಂಬೇಡ್ಕರ್ ವಸತಿ ಮನೆಗಳು ಮತ್ತು ಪ್ರಧಾನಮಂತ್ರಿ ಅವಾಸ್ ಯೋಜನೆಯ ಬಿಲ್‌ಗಳು ಸರಿಯಾಗಿ ಆಗುತ್ತಿಲ್ಲ. ತಕ್ಷಣ ಜಿಪಿಎಸ್ ಮಾಡಿಸಿ ಬಿಲ್‌ಗಳನ್ನು ಪಾವತಿಸಲು ಆದೇಶಿಸಬೇಕು.
ಅಂಬೇಡ್ಕರ್/ವಾಲ್ಮೀಕಿ ಭವನಗಳ ದುರಸ್ತಿ: ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿ ಹಾಳಾಗಿರುವ ಅಂಬೇಡ್ಕರ್ ಭವನಗಳು ಮತ್ತು ವಾಲ್ಮೀಕಿ ಭವನಗಳನ್ನು (ಬಾಗಿಲು, ಕಿಟಕಿ ಮುರಿದಿರುವುದು) ತಕ್ಷಣ ನಿರ್ಮಾಣ/ದುರಸ್ತಿಗೊಳಿಸಿ ವಿದ್ಯುತ್, ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಅಂಬೇಡ್ಕರ್ ಅವರ ಮೂರ್ತಿಯನ್ನು ನಿಗದಿತ ಸ್ಥಳದಲ್ಲಿ ಅತಿ ಶೀಘ್ರದಲ್ಲಿ ಸ್ಥಾಪಿಸಬೇಕು ಎಂದರು
ಮತ್ತು ಇನ್ನೂ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಕಾಂತ್ ಮಾದರ, ಮತ್ತು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಹನುಮವ್ವ ಮರೆಣ್ಣವರ, ನೀಲವ್ವ ದುಳಾಯಿ, ಮತ್ತು ತಾಲೂಕ ಅಧ್ಯಕ್ಷರಾದ ಶೇಖರ ಮಾದರ, ಮಹಿಳಾ ಘಟಕದ ತಾಲೂಕ ಅಧ್ಯಕ್ಷರಾದ ನೀಲವ್ವ ಮಾದರ, ಇನ್ನೂ ಅನೇಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ : ಮಂಜುನಾಥ ಕಲಾದಗಿ




