ಹೈದರಾಬಾದ್(ತೆಲಂಗಾಣ): ನಗರದ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ಭರವಸೆ ನೀಡಿ ಜರ್ಮನ್ ಯುವತಿಯನ್ನು ಹಾಗೂ ಆಕೆಯ ಸ್ನೇಹಿತನನ್ನು ಕಾರಿನಲ್ಲಿ ಕರೆದೊಯ್ದ ಕ್ಯಾಬ್ ಚಾಲಕನೋರ್ವ ಅಲ್ಲೇ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಸೋಮವಾರ ರಾತ್ರಿ ನಡೆದಿತ್ತು. ದುಷ್ಕೃತ್ಯದ ಬಳಿಕ ಸಂತ್ರಸ್ತೆಯನ್ನು ಅದೇ ಕಾರಿನಲ್ಲಿ ವಾಪಸ್ ಕರೆದುಕೊಂಡು ಹೋಗುತ್ತಿದ್ದಾಗ ಆಕೆ ಕಾರಿಂದ ಜಿಗಿದು ಪರಾರಿಯಾಗಿದ್ದಳು. ಬಳಿಕ ತನ್ನೊಂದಿಗೆ ಬಂದಿದ್ದ ಜರ್ಮನ್ ಸ್ನೇಹಿತ ಮತ್ತು ಆಟೋ ಚಾಲಕನ ಸಹಾಯದಿಂದ ಪಹಾಡಿ ಶರೀಫ್ ಪೊಲೀಸರನ್ನು ಸಂಪರ್ಕಿಸಿದ್ದು, ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಸದ್ಯ ಆರೋಪಿಯ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇದೇ 3ರಂದು ಅಂದರೆ ಗುರುವಾರ ಯುವತಿಯು ತನ್ನ ತವರು ದೇಶಕ್ಕೆ ತೆರಳಲಿದ್ದು ಪೊಲೀಸರು ತನಿಖೆಗೆ ಸಂಪೂರ್ಣ ವಿವರ ಸಂಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ ಘಟನೆಯ ವರದಿಯನ್ನು ಭಾರತದಲ್ಲಿರುವ ಜರ್ಮನ್ ಕಾನ್ಸುಲೇಟ್‌ಗೆ ಕಳುಹಿಸಲು ರಾಚಕೊಂಡ ಪೊಲೀಸರು ಸಿದ್ಧತೆ ನಡೆಸಿದ್ದಾರೆ.