ಮಿಂಚಿದ ಪ್ರಿಯಾನ್ಸ್ ಆರ್ಯಗೆ ಪಂದ್ಯ ಶ್ರೇಷ್ಠ ಗೌರವ
ಚಂದಿಗಢ: ಪಂಜಾಬ್ ಕಿಂಗ್ಸ್ ತಂಡವು ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯ 22 ನೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 18 ರನ್ ಗಳಿಂದ ಮಣಿಸಿತು.
ಮಹಾರಾಜ್ ಯಧುವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 219 ರನ್ ಗಳಿಸಿತು. ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 5 ವಿಕೆಟ್ ಗೆ 201 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿತು.
ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಡೆವುನ್ ಕಾನ್ವೆ 49 ಎಸೆತಗಳಲ್ಲಿ 6 ಬೌಂಡರಿ 2 ಸಿಕ್ಸರ್ ನೆರವಿನಿಂದ 69 ರನ್ ಗಳಿಸಿದರು. ಶಿವಂ ದುಬೈ 27 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ನೆರವಿನಿಂದ 42 ರನ್ ಸಿಡಿಸಿದರೆ, ಮಹೇಂದ್ರ ಸಿಂಗ್ ಧೋನಿ 12 ಎಸೆತಗಳಲ್ಲಿ 1 ಬೌಂಡರಿ 3 ಸಿಕ್ಸರ್ ನೆರವಿನಿಂದ 27 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಡಲು ಮಾಡಿದ ಯತ್ನ ಕೈಗೂಡಲಿಲ್ಲ.
ಮಿಂಚಿದ ಪ್ರಿಯಾನ್ಸ್: 24 ವರ್ಷದ ಯುವ ಆಟಗಾರ ಪ್ರಿಯಾನ್ಸ್ ಆರ್ಯ ಅವರ ವೇಗದ ಶತಕ 103 ( 42 ಎಸೆತ, 7 ಬೌಂಡರಿ, 9 ಸಿಕ್ಸರ್) ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಗಿತ್ತು.ಶಶಾಂಕ ಸಿಂಗ್ 36 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ನೆರವಿನಿಂದ ಅಜೇಯ 52 ರನ್ ಗಳಿಸಿದರು. ಮಾರ್ಕೋ ಜಾನ್ಸ್ ಅಜೇಯ 34 ರನ್ ತಂದು ಪಂಜಾಬ್ ಕಿಂಗ್ಸ್ ತಂಡಕ್ಕೆ ನೆರವಾಗಿದ್ದರು.