ತುರುವೇಕೆರೆ: ಪೋಷಕರು ಮತ್ತು ಶಿಕ್ಷಕರ ನಡುವೆ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂಬುದನ್ನು ಇಂಡಿಯನ್ ಪಬ್ಲಿಕ್ ಸ್ಕೂಲ್ ಶಾಲೆ ಸಾಧಿಸಿ ತೋರಿಸಿದೆ ಎಂದು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಡಾ.ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಪಟ್ಟಣದ ಇಂಡಿಯನ್ ಪಬ್ಲಿಕ್ ಸ್ಕೂಲ್ ಶಾಲೆಯ 14 ನೇ ವರ್ಷದ ವಾರ್ಷಿಕೋತ್ಸವ ಐಪಿಎಸ್ ಸಂಭ್ರಮ ಕಾರ್ಯಕ್ರಮದ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು, ತುರುವೇಕೆರೆ ಪಟ್ಟಣದಲ್ಲಿ ಉತ್ತಮ ಗುಣಮಟ್ಟದ ಶಾಲೆ ತೆರೆಯಬೇಕೆಂಬ ಆಶಯ ನಮ್ಮದಿದ್ದ ಸಂದರ್ಭದಲ್ಲಿ ಸಾಕಷ್ಟು ಟೀಕೆ ಕೇಳಿಬಂದಿತು, ಕಾರಣ ಈ ಸ್ಥಳದಲ್ಲಿ ಸ್ಮಶಾನವಿದ್ದುದು. ಸ್ಮಶಾನ ಬಳಿ ಮಕ್ಕಳ ಶಾಲೆ ತೆರೆಯುವುದು ಸರಿಯೇ ಎಂಬ ಚರ್ಚೆ ನಡೆದಿತ್ತು. ಅಂದು ಈಶ್ವರನನ್ನು, ಕಲ್ಮಠಾಧೀಶರನ್ನು ಧ್ಯಾನಿಸಿ, ಶಾಲೆಯನ್ನು ತೆರೆಯುವ ಸಂಕಲ್ಪ ಮಾಡಿದೆ. ಭಗವಂತನ ಸಂಕಲ್ಪದಿಂದ ಉತ್ತಮ ಶೈಕ್ಷಣಿಕ ಆಡಳಿತಾಧಿಕಾರಿಯಾಗಿರುವ ರುದ್ರಯ್ಯ ಹಿರೇಮಠರು ಮಠಕ್ಕೆ ಬಂದರು. ಅವರೊಂದಿಗೆ ಚರ್ಚಿಸಿ ಶಾಲೆಯ ಪೂರ್ಣ ಜವಾಬ್ದಾರಿ ನೀಡಿ ಪ್ರಾರಂಭಿಸಿದೆವು. ಇಂದು ಇಂಡಿಯನ್ ಪಬ್ಲಿಕ್ ಸ್ಕೂಲ್ ಶಾಲೆಯು ನೂರಾರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದಂತಹ ಶಿಕ್ಷಣವನ್ನು ಒದಗಿಸಿ ತಾಲ್ಲೂಕಿನಲ್ಲೇ ಉತ್ತಮ ಹೆಸರನ್ನು ಗಳಿಸಿದೆ ಎಂದರು.
ಐಪಿಎಸ್ ಸಂಭ್ರಮ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ, ಹಾಲಪ್ಪ ಪ್ರತಿಷ್ಠಾನದ ಸಂಸ್ಥಾಪಕ ಮುರಳೀಧರ ಹಾಲಪ್ಪ, ತುಮಕೂರು ಜಿಲ್ಲೆಯಲ್ಲಿ ಯಾವುದೇ ಸಿ.ಬಿ.ಎಸ್.ಇ., ಐ.ಸಿ.ಎಸ್.ಇ., ರಾಜ್ಯ ಪಠ್ಯಕ್ರಮದ ಶಾಲೆಯು ಮಾಡಿರದಂತಹ ಸಾಧನೆಗಳನ್ನು ಇಂಡಿಯನ್ ಪಬ್ಲಿಕ್ ಸ್ಕೂಲ್ ಶಾಲೆಯು ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುವಂತಹ ಪ್ರತಿಭಾವಂತ ಕ್ರೀಡಾಪಟುಗಳನ್ನು ಸೃಷ್ಟಿಸಿರುವುದು ಶಾಲೆಯ ಮಹತ್ತರ ಸಾಧನೆಯಾಗಿದೆ ಎಂದರು.
ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಿದೆ. ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಶೈಕ್ಷಣಿಕ ಚಟುವಟಿಕೆಯ ಪ್ರಗತಿಗಾಗಿ ಕೆಲವೊಂದು ಸಂದರ್ಭ ಕಠಿಣವಾಗಿ ಮಾತನಾಡುತ್ತಾರೆ. ಅದನ್ನೇ ದೊಡ್ಡದು ಮಾಡಿ ವಿದ್ಯಾರ್ಥಿಗಳು ಪೋಷಕರ ಬಳಿ ದೂರುವುದು, ಪೋಷಕರು ಶಾಲೆಗೆ ಬಂದು ಶಿಕ್ಷಕರನ್ನು ಪ್ರಶ್ನಿಸುವುದನ್ನು ಮಾಡಬಾರದು. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಯ ನಡುವೆ ಹಾಗೂ ಶಿಕ್ಷಕರು ಮತ್ತು ಪೋಷಕರ ನಡುವಿನ ಸಂಬಂಧ ಹದಗೆಡುತ್ತದೆ. ಶಿಕ್ಷಕರಿಗೆ ಮಕ್ಕಳಿಗೆ ಚೆನ್ನಾಗಿ ಕಲಿಸಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆನ್ನುವ ಉದ್ದೇಶವಿರುತ್ತದೆಯೇ ಹೊರತು ಮಕ್ಕಳನ್ನು ಸುಮ್ಮನೆ ಶಿಕ್ಷಿಸುವ ಮನಸ್ಸಿರುವುದಿಲ್ಲ ಎಂಬುದನ್ನು ಪೋಷಕರು ಮನಗಾಣಬೇಕು. ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಲೆಂಬ ಉದ್ದೇಶದಿಂದ ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸುವ ಶಿಕ್ಷಕರ ಬಗ್ಗೆ ಪೋಷಕರು ಉತ್ತಮ ಭಾವನೆ ಮತ್ತು ನಂಬಿಕೆಯನ್ನು ಹೊಂದಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಶಿವಯೋಗೀಶ್ವರ ವಿದ್ಯಾಪೀಠದ ಕಾರ್ಯದರ್ಶಿ ಡಾ.ರುದ್ರಯ್ಯ ಹಿರೇಮಠ ಮಾತನಾಡಿ, ಶಾಲೆಯ ಅಭೂತಪೂರ್ವ ಯಶಸ್ಸಿಗೆ ಕಾರಣರಾದ ಶ್ರೀಗಳು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ, ಪೋಷಕರು, ಶಿಕ್ಷಕ ವೃಂದ, ಮಾಧ್ಯಮದವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಶುಪಾಲೆ ಪುಷ್ಪ ಎಸ್.ಪಾಟೀಲ್, ಮುಖ್ಯ ಶಿಕ್ಷಕಿ ಶಶಿಕಲಾ ಎಸ್.ಹಿರೇಮಠ, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್