ಬೆಂಗಳೂರು: ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಮೊಬೈಲ್ ಫೋನ್‌ನಲ್ಲಿ ಕೇವಲ ಸಂಗ್ರಹಿಸಿಟ್ಟುಕೊಳ್ಳುವುದು ಕೂಡ ಪೋಕ್ಸೋ (POCSO) ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಳ್ಳೂರಿನ ಪಿ.ಜೆ.ಬಿನೋಜ್ ಎಂಬ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆ-2012ರ ಸೆಕ್ಷನ್ 15 ಮತ್ತು ಐಟಿ ಕಾಯ್ದೆ-2000ರ ಸೆಕ್ಷನ್ 67(ಬಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆತನ ಮೊಬೈಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳ ಅಶ್ಲೀಲ ಚಿತ್ರಗಳು ಪತ್ತೆಯಾಗಿದ್ದವು. ಇದನ್ನು ಪ್ರಶ್ನಿಸಿ, ತನ್ನ ಮೇಲಿನ ಎಫ್‌ಐಆರ್ ಮತ್ತು ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಬಿನೋಜ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದನು.
ಅರ್ಜಿದಾರನ ಪರ ವಕೀಲರು, “ಚಿತ್ರಗಳನ್ನು ಕೇವಲ ಸಂಗ್ರಹಿಸಲಾಗಿದೆಯೇ ಹೊರತು ಯಾರಿಗೂ ಕಳುಹಿಸಿಲ್ಲ ಅಥವಾ ಪ್ರಸಾರ ಮಾಡಿಲ್ಲ, ಆದ್ದರಿಂದ ಇದು ಅಪರಾಧವಲ್ಲ” ಎಂದು ವಾದಿಸಿದ್ದರು. ಆದರೆ, ಈ ವಾದವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ತಳ್ಳಿಹಾಕಿತು.
ಸಂಗ್ರಹವೂ ಅಪರಾಧ
ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುವುದು ಮಾತ್ರವಲ್ಲದೆ, ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿರುವ ಸಾಧನಗಳಲ್ಲಿ (ಮೊಬೈಲ್) ಅಂತಹ ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಪೋಕ್ಸೋ ಕಾಯ್ದೆಯ ಸೆಕ್ಷನ್ 15ರ ಅಡಿಯಲ್ಲಿ ಅಪರಾಧವಾಗುತ್ತದೆ.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೂಡ ಈಗಾಗಲೇ ಸ್ಪಷ್ಟ ತೀರ್ಪು ನೀಡಿದೆ ಎಂದು ಹೈಕೋರ್ಟ್ ನೆನಪಿಸಿದೆ.
ಈ ತೀರ್ಪಿನ ಮೂಲಕ, ಡಿಜಿಟಲ್ ಸಾಧನಗಳಲ್ಲಿ ಮಕ್ಕಳ ಸುರಕ್ಷತೆಗೆ ಧಕ್ಕೆ ತರುವಂತಹ ಯಾವುದೇ ವಿಷಯಗಳನ್ನು ಹೊಂದುವುದು ಕಾನೂನುಬಾಹಿರ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.




