ಬೆಂಗಳೂರು: ಆಡಳಿತ ಪಕ್ಷದ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ವಿಚಾರ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಕಾಂಗ್ರೆಸ್ ಗಲಾಟೆ ಕಡಿಮೆ ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸಿದ್ದವಾಗಿದ್ದು, ಶಾಸಕರು ಹಾಗೂ ಮಂತ್ರಿಗಳನ್ನ ಭೇಟಿ ಮಾಡುತ್ತಿದ್ದಾರೆ.
ಇದೀಗ ಸಚಿವ ಸತೀಶ್ ಜಾರಕಿಹೊಳಿ ಸುರ್ಜೆವಾಲ ಬಳಿ ಮಾತನಾಡಿರುವ ವಿಚಾರದ ಬಗ್ಗೆ ಸುದ್ದಿಯೊಂದು ಹರಡಿದ್ದು, ಹೊಸ ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ.
ನನಗೂ ಎರಡು ಸ್ಥಾನ ಕೊಟ್ಟರೆ ನಿಭಾಯಿಸುವೆ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನ ಭೇಟಿ ಮಾಡಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಒಬ್ಬರು ಎರಡು ಹುದ್ದೆಗಳನ್ನ ಪಡೆದಿರುವುದರಿಂದ ರಾಜ್ಯದಲ್ಲಿ ಸಮಸ್ಯೆ ಆಗುತ್ತಿದೆ ಎಂದಿದ್ದಾರೆ.
ಇದಕ್ಕಿಂತ ಮುಖ್ಯವಾಗಿ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನ ಎರಡೂ ಕೊಟ್ಟರೂ ಸಹ ಉತ್ತಮವಾಗಿ ನಿಭಾಯಿಸುತ್ತೇನೆ ಎನ್ನುವ ಮೂಲಕ ತಮ್ಮ ಮನದ ಆಸೆಯನ್ನ ಬಿಚ್ಚಿಟ್ಟಿದ್ದಾರೆ.
ಒಬ್ಬರೇ ಎರಡೆರಡು ಹುದ್ದೆಯಲ್ಲಿ ಇದ್ದರೆ ಅವರು ಎಲ್ಲಾ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ತಳಮಟ್ಟದಲ್ಲಿ ಪಕ್ಷದ ಸಂಘಟನೆ ಮಾಡದಿದ್ದರೆ ಚುನಾವಣೆ ಗೆಲ್ಲಲು ಆಗುವುದಿಲ್ಲ. ಹಾಗಾಗಿ ನಮ್ಮ ಅಭಿಪ್ರಾಯದ ಪ್ರಕಾರ ರಾಜ್ಯದಲ್ಲಿ ಕೆಲ ಬದಲಾವಣೆ ಮಾಡಿದರೆ ಒಳ್ಳೆಯದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.