ಬೆಳಗಾವಿ : ಆರ್ಎಸ್ಎಸ್ ಹಾಗೂ ಬಿಜೆಪಿಗರನ್ನು ನೋಡಿಕೊಳ್ಳಿ ಅಂತಾ ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದರೆ ಸಾಕು, ಇವರಿಗೆ ಬಾಲ ಬಿಚ್ಚದಂತೆ ಮಾಡ್ತಾರೆ, ಬಾಲ ಬಿಚ್ಚಲು ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಅಬ್ಬರಿಸಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ಧೋರಣೆಯನ್ನು ಖಂಡಿಸಿ ಕಾಂಗ್ರೆಸ್ ಆಯೋಜಿಸಿರುವ ಜನಾಕ್ರೋಶ ಸಭೆಯಲ್ಲಿ ಸಿಎಂ ಭಾಷಣ ಮಾಡುವಾಗ, ಬಿಜೆಪಿಯ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ಮಾಡಿ ಅಡ್ಡಿಪಡಿಸಲಾಯಿತು. ಈ ವೇಳೆ ಸಿಟ್ಟಾದ ಸಿಎಂ ಪೊಲೀಸರು ಮೇಲೂ ಗರಂ ಆದರು.
ಇಂತಹ ಬಿಜೆಪಿಯವರ ಗೊಡ್ಡು ಬೆದರಿಕೆಗಳಿಗೆ ನಾವು ಹೆದರಲ್ಲ. ಸಾರ್ವಜನಿಕವಾಗಿ ಅವರನ್ನು ಎದುರಿಸುವ ಶಕ್ತಿ ನಮಗಿದೆ. ಈ ರೀತಿ ದುಷ್ಕೃತ್ಯ ಮಾಡುವವರಿಗೆ ಇಡೀ ಕಾಂಗ್ರೆಸ್ ನಿಂದ ಧಿಕ್ಕಾರ. ಬಿಜೆಪಿಯವರಿಂದ ಶಾಂತಿ ಕದಡುವ, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಹೀಗೆ ಮಾಡಲಾಗುತ್ತದೆ ಎಂದು ಗುಡುಗಿದರು.
ಬೆಲೆ ಏರಿಕೆಯ ವಿರುದ್ಧವಾಗಿ ಬಿಜೆಪಿಯವರು, ಅವರ ತಪ್ಪುಗಳನ್ನು ಮುಚ್ಚಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 11 ವರ್ಷಗಳಾಗಿವೆ. 2014ರವರೆಗೆ ಡಾ.ಮನಮೋಹನ್ಸಿಂಗ್ ಅವರು ಪ್ರಧಾನಿಯಾಗಿದ್ದರು.
ಆವತ್ತು ಅಗತ್ಯವಸ್ತುಗಳ ಬೆಲೆ ಎಷ್ಟಿತ್ತು? ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಕಚ್ಚಾ ತೈಲ ಬೆಲೆ ಆಗ ಮತ್ತು ಈಗ ಎಷ್ಟಿದೆ ಎಂದು ಜನ ಅರ್ಥ ಮಾಡಿಕೊಳ್ಳಬೇಕು. ಇವತ್ತು ಜನರಿಗೆ ಯಾರು ಟೋಪಿ ಹಾಕ್ತಿದ್ದಾರೆ, ವಂಚನೆ ಯಾರು ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಬೇಕಾಗಿದೆ. ಆ ನಿಟ್ಟ ನಾವು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.
ಬಿಜೆಪಿಯವರು ಜಾತಿ, ಧರ್ಮದ ಹೆಸರಲ್ಲಿ ಸಮಾಜವನ್ನು ಛಿದ್ರ ಮಾಡುತ್ತಿದ್ದಾರೆ. ಜನ ಅವರ ಮಾತಿಗೆ ಕಿವಿಕೊಡಬಾರದು ಎಂದ ಸಿಎಂ, ಮೇ.1ರಂದು ಹುಬ್ಬಳ್ಳಿಯಲ್ಲಿ ಇದೇ ಕಾರ್ಯಕ್ರಮ ನಡೆಯಲಿದೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆ ಕಾರಣಕ್ಕೆ ಅವರ ಸುಳ್ಳುಗಳನ್ನು ನಾವು ಜನರಿಗೆ ತಿಳಿಸಲು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ.
2015ರಲ್ಲಿ ಲೀಟರ್ ಡೀಸೆಲ್ ಗೆ ರೂ.49-50, ಗ್ಯಾಸ್ ರೂ.400 ಚಿಲ್ಲರೆ ಇತ್ತು. ಆದರೆ ಇವತ್ತು ಎಷ್ಟಾಗಿದೆ ಎಂದು ಬಿಜೆಪಿಯವರು ಮಾತನಾಡಲಿ. ಒಂದು ಬ್ಯಾರಲ್ ಕಚ್ಚಾ ತೈಲ 125 ಡಾಲರ್ ಆಗ ಇತ್ತು.
ಇವತ್ತು 62 ಡಾಲರ್ ಇದೆ. ಆದರೂ ಪೆಟ್ರೋಲ್, ಡೀಸೆಲ್ ಬೆಲೆಯಾಕೆ ಕೇಂದ್ರ ಸರ್ಕಾರ ಕಡಿಮೆ ಮಾಡಿಲ್ಲ. ಅವರು ಲೂಟಿ ಮಾಡುತ್ತಿದ್ದಾರೆ. ಕಿಂಚಿತ್ತೂ ಮಾನ ಮರ್ಯಾದೆ ಇಲ್ಲದೇ ಜನಾಕ್ರೋಶ ಅಂತಾ ಮಾಡುತ್ತಿದ್ದಾರೆ.ನಿಮಗೆ ನಾಚಿಕೆಯಾಗಲ್ವಾ? ಬೆಲೆ ಏರಿಕೆಯನ್ನು ಯದ್ವಾತದ್ವಾ ಏರಿಸಿದ್ದೀರಿ. ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಮಾಡಿದೆ ಅಂತಾ ಸುಳ್ಳು ಹೇಳುತ್ತೀದ್ದೀರಿ ಎಂದು ಸಿಎಂ ಅಬ್ಬರಿಸಿದರು.
ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ, ಭಾರತೀಯರ ಬದುಕನ್ನು ಬೆಲೆ ಏರಿಕೆಯಲ್ಲಿ ಬೇಯಿಸುತ್ತಾ, ಭಾರತೀಯ ಸಮಾಜವನ್ನು ಛಿದ್ರಗೊಳಿಸುತ್ತಾ, ಬಿರುಕು ಮೂಡಿಸುತ್ತಾ ಜನದ್ರೋಹಿಯಾಗಿ ವರ್ತಿಸುತ್ತಿರುವುದು ಬಿಟ್ಟರೆ ಬೇರೆ ಏನು ಮಾಡಿದ್ದೀರಿ ತೋರಿಸಿ ಜನರಿಗೆ ಎಂದು ಸವಾಲು ಹಾಕಿದರು.
ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ನೀವು ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ ? ಸ್ವಾತಂತ್ರ್ಯ. ಹೋರಾಟಕ್ಕೆ ಏಕೆ ಬರಲಿಲ್ಲ ? ಏನ್ ಮಾಡ್ತಾ ಕೂತಿದ್ರಿ ಆಗ? ಮೊನ್ನೆ ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು, ಕರ್ನಾಟಕದ ಮೂವರು ಅಮಾಯಕರನ್ನು ರಾಜಾರೋಷವಾಗಿ ಗನ್ ಗಳ ಸಮೇತ ಬಂದು ಅಮಾನುಷವಾಗಿ ಹತ್ಯೆ ಮಾಡಿ ಹೋದರಲ್ಲಾ ಇದು ಕೇಂದ್ರ ಸರ್ಕಾರದ ಲೋಪ ಅಲ್ಲವಾ ? ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲ ಆಗಿರುವುದನ್ನು ನಾವು ಭಾರತೀಯರು ಪ್ರಶ್ನಿಸಬಾರದಾ ? ಪ್ರಶ್ನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸ್ತೀರಾ? ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ RSS ಕಚೇರಿ ಮೇಲೆ ಭಾರತದ ಬಾವುಟ ಹಾರಿಸಲೇ ಇಲ್ಲ ನೀವು. ನಾಚಿಕೆ ಆಗುವುದಿಲ್ಲವೇ ನಿಮಗೆ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ಭಾರತ ನಿರ್ಮಾಣದವರೆಗೂ ಬಿಜೆಪಿ, ಸಂಘ ಪರಿವಾರದ ಕೊಡುಗೆ ಏನಿದೆ ? ನಾಚಿಕೆ ಇಲ್ಲದೆ ದೇಶಭಕ್ತಿ ಬಗ್ಗೆ ಮಾತಾಡ್ತೀರಾ. ಭಾರತೀಯ ಸಮಾಜವನ್ನು ಬಿರುಕು ಮೂಡಿಸಿದ್ದು ಬಿಟ್ಟರೆ ಇಷ್ಟು ವರ್ಷಗಳ ನಿಮ್ಮ ಕೊಡುಗೆ ಭಾರತಕ್ಕೆ ಏನು ಕೊಟ್ಟಿದ್ದೀರಿ ಎಂದು ದೇಶದ ಜನಕ್ಕೆ ವಿವರಿಸಿ ಎಂದು ಸವಾಲು ಹಾಕಿದರು.